ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಸಂರಕ್ಷಿಸುವ ಮೂಲಕ ನಾಡನ್ನು ಗೌರವಿಸಬೇಕು : ಎಸ್ ಆರ್ ವಿಶ್ವನಾಥ್

ಯಲಹಂಕ : ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಸಂರಕ್ಷಿಸುವ ಮೂಲಕ ಕನ್ನಡ ನಾಡನ್ನು ಗೌರವಿಸಬೇಕು, ಅದು ನಮ್ಮ ಧ್ಯೇಯವಾಗಬೇಕು ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನಲ್ಲಿ ಆಯೋಜಿತವಾಗಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಈ ವೇಳೆಯಲ್ಲಿ, ಭಾರತದ ವಿವಿಧ ಸಂಸ್ಥಾನಗಳನ್ನು ಒಗ್ಗೂಡಿಸಿ ಜಮ್ಮು ಮತ್ತು ಕಾಶ್ಮೀರ, ಹೈದರಾಬಾದ್ ಮತ್ತು ಗೋವಾದಂತಹ ಪ್ರದೇಶಗಳನ್ನು ಸಂಯೋಜಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮಹತ್ತರ ದೂರದೃಷ್ಟಿಯನ್ನು ನಾವು ಸ್ಮರಿಸಬೇಕು. ಕರ್ನಾಟಕ ಏಕೀಕರಣದ ನಂತರ, ನವೆಂಬರ್ 1, 1956ರಂದು ನಮ್ಮ ರಾಜ್ಯವನ್ನು ಭಾಷೆಯ ಆಧಾರದ ಮೇಲೆ ಪುನರ್ ಸಂಘಟಿಸಲಾಯಿತು, ನಂತರ 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಕನ್ನಡನಾಡು ಅತ್ಯಮೂಲ್ಯವಾದ ಸಮೃದ್ಧ ನೈಸರ್ಗಿಕ ಸಂಪನ್ಮೂಲಗಳು, ಶ್ರೀಮಂತ ಖನಿಜ ಸಂಪತ್ತು ಮತ್ತು ಎಲ್ಲೆಡೆಯಿಂದಲೂ ಜನರನ್ನು ಆಕರ್ಷಿಸುವ ಸುರಕ್ಷಿತ ಪರಿಸರದಿಂದ ಆಶೀರ್ವದಿಸಲ್ಪಟ್ಟಿದೆ. ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ವನಕೆ ಓಬವ್ವರಂತಹ ಧೀರ ವೀರರನ್ನು ಪೋಷಿಸಿದ ಐತಿಹಾಸಿಕ ಭೂಮಿಯಲ್ಲಿ ನಾವು ವಾಸಿಸುತ್ತಿರುವುದು ನಮ್ಮ ಅದೃಷ್ಟ. ನಮ್ಮ ನಾಡು, ನುಡಿ, ಸಂಸ್ಕೃತಿ, ಪರಂಪರೆಯ ಗುರುತನ್ನು ಹೆಮ್ಮೆಯಿಂದ ಅಪ್ಪಿಕೊಳ್ಳುವ ನಾವು ನಮ್ಮ ನಾಡನ್ನು ಗೌರವಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ ಅವರು ಮಾತನಾಡಿ ‘ಕರ್ನಾಟಕವು ಈಗ ವಯೋಮಾನ ಹೆಚ್ಚುತ್ತಿರುವ ಜನಸಂಖ್ಯಾ ಪ್ರವೃತ್ತಿಯನ್ನು ಎದುರಿಸುತ್ತಿದೆ ಮತ್ತು ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಕಡಿಮೆ ಯುವ ಜನಸಂಖ್ಯೆ ಯನ್ನು ಹೊಂದಿದೆ; ಇದೇ ರಾಜ್ಯಕ್ಕೆ ಹೊರಗಿನಿಂದ ಜನರು ವಲಸರ ಬರಲು ಕಾರಣವಾಗಿದೆ. ಹೊರರಾಜ್ಯಗಳಿಂದ ಬಂದವರಿಗೆ ನಮ್ಮ ಕನ್ನಡ ಭಾಷೆಯನ್ನು ಕಲಿಯಲು ನಾವು ಪ್ರೋತ್ಸಾಹಿಸಬೇಕು. ದೇಶದಲ್ಲೇ ಅತ್ಯಧಿಕ ತಲಾ ಆದಾಯ ಮತ್ತು ದೇಶದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಜ್ಯವಾಗಿರುವ ನಮ್ಮ ನಾಡಿನ ಈ ಸಮೃದ್ಧಿಯನ್ನು ನಾವು ರಕ್ಷಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಎನ್.ಎಂ.ಐ.ಟಿ.ಯ ಪ್ರಾಂಶುಪಾಲ ಡಾ.ಎಚ್.ಸಿ. ನಾಗರಾಜ್, ಉಪ ಪ್ರಾಂಶುಪಾಲ ಡಾ.ಜೆ.ಸುಧೀರ್ ರೆಡ್ಡಿ, ಸಂಸ್ಥೆಯ ‘ಚಿಗುರು’ ಸಾಂಸ್ಕೃತಿಕ ಸಂಘದ ಅಧ್ಯಾಪಕ ಸಂಯೋಜಕಿ ಡಾ.ಎನ್.ನಳಿನಿ, ನಿಟ್ಟೆ ಸ್ಕೂಲ್ ಆಫ್ ಫಾರ್ಮಾಸಿಟಿಕಲ್ ಸೈನ್ಸಸ್‌ನ ಪ್ರಾಂಶುಪಾಲೆ ಡಾ.ಕುಸುಮ್ ದೇವಿ, ಫ್ಯಾಷನ್ ಟೆಕ್ನಾಲಜಿ, ಇಂಟೀರಿಯರ್ ಡಿಸೈನ್ ನ ಪ್ರಾಂಶುಪಾಲೆ ಡಾ.ಸಂಧ್ಯಾ ರವಿ, ಆರ್ಕಿಟೆಕ್ಚರ್, ಪ್ಲಾನಿಂಗ್ ಮತ್ತು ಡಿಸೈನ್‌ನ ಪ್ರಾಂಶುಪಾಲೆ ಪ್ರೊ.ನಂದಿತಾ ನಾಗರಾಜ್, ಎನ್.ಎಂ.ಐ.ಟಿ. ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ.ಹಿತಾ ಡಿ. ಶೆಟ್ಟಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ‘ನಾನೂ ಕನ್ನಡ ಬಲ್ಲೆ’ ಎಂಬ ಸ್ಪರ್ಧಾ ವಿಭಾಗದಲ್ಲಿ ಇತರ ರಾಜ್ಯಗಳ ಮತ್ತು ವಿದೇಶಿ ವಿದ್ಯಾರ್ಥಿಗಳ ಹೆಚ್ಚಿನ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು.

Leave a Reply

Your email address will not be published. Required fields are marked *