



ಮೂರು ದಿನಗಳ ಸಸ್ಯಸಂತೆಗೆ ತೆರೆ :
ಯಲಹಂಕ : ಕೃಷಿ ಮತ್ತು ತೋಟಗಾರಿಕೆ ಭಾರತೀಯರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅನಾದಿಕಾಲ ದಿಂದಲೂ ನಮ್ಮ ಬದುಕು ಕೃಷಿಯೊಂದಿಗೆ ಸಮ್ಮಿಳಿತಗೊಂಡಿದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ತಿಳಿಸಿದರು.
ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಮತ್ತು ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ನಗರದ ಜಿಕೆವಿಕೆ ಆವರಣದಲ್ಲಿರುವ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಮೂರು ದಿನಗಳ ಸಸ್ಯಸಂತೆ ಮತ್ತು ಪರಿಸರ ದಿನಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಭಾರತ ಪ್ರಾಚೀನ ಕಾಲದಿಂದಲೂ ವಿಶ್ವಗುರುವಾಗಿಯೇ ಗುರುತಿಸಿಕೊಂಡಿದೆ. ಜಗತ್ತಿಗೆ ತಮ್ಮದೇ ಆದ ಆಯುರ್ವೇದ ವೈದ್ಯಪದ್ದತಿ, ಖಗೋಳ ವಿಜ್ಞಾನ, ಗಣಿತಶಾಸ್ತ್ರದ ಕೊಡುಗೆಯನ್ನು ನಮ್ಮ ಪ್ರಾಚೀನ ಋಷಿಮುನಿಗಳು ನೀಡಿದ್ದಾರೆ. ಸಸ್ಯಶ್ಯಾಮಲೆ ಎಂದು ಹೆಸರಾದ ನಮ್ಮ ದೇಶದ ಜನರ ಬದುಕಿಗೆ ಕೃಷಿ,ತೋಟಗಾರಿಕೆಯೇ ಮೂಲಾಧಾರವಾಗಿದೆ.
ನಮ್ಮ ದೇಶದ ಜನತೆ ಎಲ್ಲಿಯವರೆಗೆ ನಮ್ಮ ಪಾರಂಪರಿಕ ಜೀವನಕ್ರಮದ ಅನುಸರಣೆಯ ಮೂಲಕ ನಿಸರ್ಗದ ಜೊತೆಗೆ ಬದುಕು ನಿರ್ವಹಿಸಿದರೋ ಅಲ್ಲಿಯವರೆಗೆ ನಮ್ಮ ಆರೋಗ್ಯ ಅತ್ಯುತ್ತಮ ರೀತಿಯಲ್ಲಿತ್ತು, ಯಾವಾಗ ನಾವು ನಮ್ಮ ದೇಶದ ಪಾರಂಪರಿಕ ಜೀವನಕ್ರಮ ಬಿಟ್ಟು ಇತರರ ಅನುಕರಣೆಗೆ ಮುಂದಾಗಿ, ಅಭಿವೃದ್ಧಿಯ ನೆಪದಲ್ಲಿ ಪರಿಸರ ನಾಶಕ್ಕೆ ಮುಂದಾದೆವೋ ಅಂದಿನಿಂದ ನಮ್ಮಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಾ ಹೋದವು. ನಿಸರ್ಗದ ಮೇಲೆ ನಾವು ಮಾಡಿರುವ ಅನಾಚಾರ, ಅನಾಧರಗಳ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಕೇರಳದ ವೈನಾಡು ಮತ್ತು ನಮ್ಮ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಸಂಭವಿಸು ತ್ತಿರುವ ಬೆಟ್ಟಗುಡ್ಡಗಳ ಕುಸಿತ ನಮ್ಮ ಪರಿಸರದ್ರೋಹಿ ಕೆಲಸಗಳ ಪ್ರತಿಫಲವಾಗಿದೆ. ಪರಿಸರ ಸಂರಕ್ಷ,ಣೆ ಮರೆತರೆ ನಮ್ಮ ಭವಿಷ್ಯ ಕರಾಳವಾಗಲಿದೆ ಇದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಲೇಕ್ ಮ್ಯಾನ್ ಖ್ಯಾತಿಯ ಆನಂದ್ ಮಲ್ಲಿಗವಾಡ ಮಾತನಾಡಿ ‘ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಂಪೇಗೌಡರು ನೂರಾರು ಕೆರೆಗಳನ್ನು ನಿರ್ಮಿಸಿದ್ದರು, ಅದಕ್ಕೂ ಮುನ್ನ ಚೋಳರು ಸಹ ಸಹಸ್ರಾರು ಕೆರೆಗಳನ್ನು ನಿರ್ಮಿಸಿದ್ದರು ಅದರೆ ಇದೀಗ ನಗರದಲ್ಲಿ ಬೆರಳೆಣಿಕೆಯ ಕೆರೆಗಳು ಮಾತ್ರ ಇವೆ, ಅವುಗಳೂ ಸಹ ಒತ್ತುವರಿರ ವಿಷವರ್ತುಲದಲ್ಲಿವೆ. ಮೊದಲು ಭೂಮಿ ನಂತರ ನೀರು ಆನಂತರ ಅರಣ್ಯ ತದನಂತರ ಜೀವಸಂಕುಲ ಉದಯವಾಯಿತು. ಭೂಮಿ, ನೀರು, ಅರಣ್ಯ ಇಲ್ಲದಿದ್ದರೆ ನಮ್ಮ ನಾಶ ನಿಶ್ಚಿತ, ಇದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ ಎಂದರು.
ತೋಟಗಾರಿಕಾ ಮಹಾ ವಿದ್ಯಾಲಯದ ಡೀನ್ ಡಾ.ಜಿ.ಎಸ್.ಕೆ.ಸ್ವಾಮಿ ಮಾತನಾಡಿ ‘ತೋಟಗಾರಿಕಾ ವಿಜ್ಞಾನಗಳ ವಿ.ವಿ.(ಬಾಗಲಕೋಟೆ) ಯಲ್ಲಿ ಆಯೋಜಿಸಿರುವ ಮೂರನೆಯ ಸಸ್ಯಸಂತೆ ಇದಾಗಿದ್ದು, ವರ್ಷದಿಂದ ವರ್ಷಕ್ಕೆ ಮೆರಗು ಹೆಚ್ಚಿಸಿಕೊಳ್ಳು ತ್ತಲೇ ಸಾಗಿದೆ. ಮೊದಲ ವರ್ಷ 30ರಿಂದ ಆರಂಭಗೊಂಡ ಮಳಿಗೆಗಳ ಸಂಖ್ಯೆ ಈ ವರ್ಷ 90ಕ್ಕೆ ತಲುಪಿದೆ, ಸಸ್ಯಸಂತೆ ವೀಕ್ಷಣೆಗೆ ಬರುವ ಸಾರ್ವಜನಿಕರ ಸಂಖ್ಯೆ ಸಹ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಾಗಿದ್ದು, ಸುಮಾರು 40 ಸಾವಿರದಷ್ಟು ಜನ ಸಸ್ಯಸಂತೆ ವೀಕ್ಷಿಸಿದ್ದಾರೆ. ಆರ್ಥಿಕ ವಹಿವಾಟಿನಲ್ಲೂ ಸಹ ಗಣನೀಯವಾದ ವೃದ್ಧಿಯಾಗಿದೆ ಎಂದು ಸಸ್ಯಸಂತೆಯ ವಿಶೇಷತೆ ಕುರಿತು ಮಾಹಿತಿ ನೀಡಿದರು.
ಸಮರೋಪ ಸಮಾರಂಭದಲ್ಲಿ ಅತ್ಯುತ್ತಮ ಮಳಿಗೆಗಳು, ಸಸಿಗಳ ಮಾರಾಟಗಾರರು ಮತ್ತು ಆಹಾರ ಪದಾರ್ಥಗಳ ಮಾರಾಟಗಾರರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ನಿರ್ದೇಶಕ ಡಾ.ಆರ್.ಕೆ.ಮೇಸ್ತ, ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ.ಎಸ್.ಎಲ್. ಜಗದೀಶ್ ಸೇರಿದಂತೆ ತೋಟಗಾರಿಕಾ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ ಈ ಒಂದು ಸುದ್ದಿ ಮಾಧ್ಯಮಕ್ಕೆ ಬೆಳೆಯಲು ಸಹಕರಿಸಿ
R Hanumanthu
9845085793
7349337989
9035282296
