

ಯಲಹಂಕ : ಯಲಹಂಕ ಕ್ಷೇತ್ರದ ಗೋವಿಂದಪುರ ಸಮೀಪ ಇರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕ್ಯಾಂಪಸ್ ನಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ 31 ನೇ ಘಟಿಕೋತ್ಸವ ಸಮಾರಂಭದಲ್ಲಿ 400 ಪದವೀಧರರು, 163 ಸ್ನಾತಕೋತ್ತರ ಪದವೀಧರರು ಮತ್ತು 28 ಪಿಎಚ್‌ಡಿ ವಿದ್ವಾಂಸರಿಗೆ ಪದವಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಬೆಂಗಳೂರಿನ ಟೀಮ್ ಲೀಸ್ ಸರ್ವಿಸಸ್ ಲಿಮಿಟೆಡ್‌ನ ಉಪಾಧ್ಯಕ್ಷ ಮನೀಷ್ ಸಬರ್ವಾಲ್ ಮಾತನಾಡಿ ‘ವೈಯಕ್ತಿಕ ಮತ್ತು ವೃತ್ತಿಪರ ಯಶಸ್ಸಿಗೆ ಶಿಕ್ಷಣ ಅಡಿಪಾಯವಾಗಿದೆ. ಆದರೆ ನಾವು ಪಡೆಯುವ ಪದವಿಯೇ ಅಂತ್ಯವಲ್ಲ ಅದು ಹೊಸ ಪ್ರಯಾಣದ ಆರಂಭವಾಗಿದೆ, ನಿಮ್ಮ ಜ್ಞಾನವು ಸಮಾಜಕ್ಕೆ ಕೊಡುಗೆ ನೀಡಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸಲು ನಿಮಗೆ ಮಾರ್ಗದರ್ಶನ ನೀಡುತ್ತದೆ. ವೇಗವಾಗಿ ಬದಲಾಗುತ್ತಿರುವ ಜಗತ್ತನ್ನು ಎದುರಿಸಲು ಅಗತ್ಯವಾದ ಕೌಶಲ್ಯಗಳನ್ನು ಮಾಹೆಯು ನಿಮಗೆ ನೀಡಿ ಸಜ್ಜುಗೊಳಿಸಿದೆ ಎಂದರು.
ಖ್ಯಾತ ಕಲಾವಿದ ಎಸ್.ಜಿ. ವಾಸುದೇವ್ ಅವರು ಮಾತನಾಡಿ ‘ಜೀವನದ ಎಲ್ಲಾ ಹಂತಗಳಲ್ಲಿ ಸೃಜನಶೀಲತೆ ಮತ್ತು ಸ್ವಯಂ ಅಭಿವ್ಯಕ್ತಿ ಬಹು ಮುಖ್ಯವಾದುದು. ಶಿಕ್ಷಣವು ಕೇವಲ ಜ್ಞಾನವನ್ನು ಸಂಪಾದಿಸುವುದು ಮಾತ್ರವಲ್ಲ; ಇದು ಸೃಜನಶೀಲತೆ ಮತ್ತು ಉದ್ದೇಶದ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದರು.
ಘಟಕೋತ್ಸವದಲ್ಲಿ ಬೆಂಗಳೂರಿನ ಸೃಷ್ಟಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಮತ್ತು ಟೆಕ್ನಾಲಜಿಯ ಅತ್ಯುತ್ತಮ ಪದವಿ ವಿದ್ಯಾರ್ಥಿಗಾಗಿ ನೀಡುವ ಡಾ. ಟಿಎಂಎ ಪೈ ಚಿನ್ನದ ಪದಕವನ್ನು ಬ್ಯಾಚುಲರ್ ಆಫ್ ಡಿಸೈನ್ ನ ಕು. ಆದ್ಯಾ ಗಿರಿಧರ್ ಅವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್, ವಿಎಸ್‌ಎಂ ನಿವೃತ್ತ ವೈಸ್ ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ್ ಸೇರಿದಂತೆ ಮಾಹೆ ಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿದ್ದರು.
