

ಬ್ಯಾಟರಾಯನಪುರ : ಭಾರತದ ಪಾರಂಪರಿಕ ಜಲಮೂಲಗಳಾದ ಬಾವಿ, ಕಲ್ಯಾಣಿ, ಕೆರೆಗಳ ಜಲ ಮೂಲವನ್ನು ಪುನರುಜ್ಜೀವನ ಗೊಳಿಸುವ ನಿಟ್ಟಿನಲ್ಲಿ ‘ಅನಂತ ಅಸ್ತ್ರ ಫೌಂಡೇಶನ್’, ಸಿಎಂಆರ್ ವಿಶ್ವ ವಿದ್ಯಾನಿಲಯದ ಎನ್ ಸಿ ಸಿ ವಿದ್ಯಾರ್ಥಿಗಳು ಮೀನುಕುಂಟೆ ಗ್ರಾ.ಪಂ. ಸಹಯೋಗದಲ್ಲಿ ‘ಭೂಮಿ ಉಳಿಸಿ, ಪರಿಸರ ಉಳಿಸಿ’ ಅಭಿಯಾನದ ಅಡಿಯಲ್ಲಿ ಮೀನುಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಕ್ಕಯ್ಯಮ್ಮನ ಬೆಟ್ಟದಲ್ಲಿ ಇರುವ ಕುಂಟೆಯ ಜಲಮೂಲ ಸ್ವಚ್ಛಗೊಳಿಸಿ, ನೀರಿನ ಪುನರುಜ್ಜೀವನ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಅನಂತ ಅಸ್ತ್ರ ಫೌಂಡೇಶನ್ ನ ಮುಖ್ಯಸ್ಥರು, ರೇವಾ ವಿಶ್ವ ವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರದೀಪ್ ಕುಮಾರ್ ಮಾತನಾಡಿ ‘ಭಾರತೀಯ ಪ್ರಾಚೀನ ಋಷಿಮುನಿಗಳು, ಶಾಸ್ತ್ರಜ್ಞರು ವಿಜ್ಞಾನ, ಗಣಿತ, ಅಂತರಿಕ್ಷ ವಿಜ್ಞಾನ, ಪರಿಸರ ವಿಜ್ಞಾನ, ಖಗೋಳ ವಿಜ್ಞಾನ ಸೇರಿದಂತೆ ಎಲ್ಲಾ ಶಾಸ್ತ್ರಗಳಲ್ಲೂ ಅತ್ಯದ್ಭುತ ಜ್ಞಾನ ಗಳಿಸಿಕೊಂಡಿದ್ದಾರೆ. ನಮ್ಮ ಪ್ರಾಚೀನರ ವಿಜ್ಞಾನ ಆಧುನಿಕ ವಿಜ್ಞಾನದ ರೀತಿಯ ಅಧಿಕ ವಿಜ್ಞಾನವಲ್ಲ ಬದಲಿಗೆ ಅಗತ್ಯ ವಿಜ್ಞಾನ, ಅದರಿಂದ ಭೂಮಂಡಲದ ಯಾವುದಕ್ಕೂ ಹಾನಿಯಾಗುವಂಥದ್ದಲ್ಲ, ಅನುಕೂಲವಾಗುವಂಥದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕ ವಿಜ್ಞಾನದ ಘೀಳಿಗೆ ಒಳಗಾಗಿ ನಾವು ನಮ್ಮ ಪರಿಸರ, ಪಾರಂಪರಿಕ ಜಲಮೂಲಗಳನ್ನು ಕಳೆದುಕೊಂಡಿದ್ದೇವೆ, ಕೆಲವು ಕಲುಷಿತಗೊಂಡು ಉಪಯೋಗಕ್ಕೆ ಬಾರದಂತಾಗಿವೆ. ಈ ನಿಟ್ಟಿನಲ್ಲಿ ನಮ್ಮ ಪಾರಂಪರಿಕ ಜಲಮೂಲಗಳಾದ ಕೆರೆ, ಬಾವಿ, ಹಳ್ಳ, ಕೊಳ್ಳಗಳು, ಕಲ್ಯಾಣಿ, ಗಿರಿಶಿಖರಗಳಲ್ಲಿ ಜಿನುಗುತ್ತಿದ್ದ ನೀರಿನ ಮೂಲಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸಿ, ಅವುಗಳಲ್ಲಿ ಪುನಃ ನೀರಿನ ಹರಿವು ಉಂಟಾಗುವಂತೆ ಮಾಡಿ, ಪುನರುಜ್ಜೀವನ ಗೊಳಿಸಬೇಕೆಂಬುದು ‘ಅನಂತ ಅಸ್ತ್ರ ಫೌಂಡೇಶನ್ ನ ಧ್ಯೇಯವಾಗಿದ್ದು, ಈ ಧ್ಯೇಯವನ್ನು ಸಾಕಾರಗೊಳಿಸಲು ಸಿಎಂಆರ್ ವಿಶ್ವ ವಿದ್ಯಾನಿಲಯ ಮತ್ತು ಮೀನುಕುಂಟೆ ಗ್ರಾಮ ಪಂಚಾಯಿತಿ ನೀಡಿರುವ ಸಹಕಾರ ಶ್ಲಾಘನೀಯವಾದುದು. ಅನಂತ ಅಸ್ತ್ರ ಫೌಂಡೇಶನ್ ತನ್ನ ಪರಿಸರ ಸೇವೆಯ ಮೊದಲ ಪ್ರಯತ್ನವಾಗಿ ಮೀನುಕುಂಟೆ ಗ್ರಾ.ಪಂ.ವ್ಯಾಪ್ತಿಯ ಅಕ್ಕಯ್ಯಮ್ಮನ ಬೆಟ್ಟವನ್ನು ಆಯ್ಕೆ ಮಾಡಿಕೊಡಿದ್ದು, ಇಲ್ಲಿ ಮುಚ್ಚಿ ಹೋಗಿರುವ ಕುಂಟೆಯ ಜಲಮೂಲವನ್ನು ಪತ್ತೆಹಚ್ಚಿ ಅದನ್ನು ಹೊರತಂದು, ಸ್ವಚ್ಛಗೊಳಿಸಿ ನೀರು ಪುನರುಜ್ಜೀವನ ವಾಗುವಂತೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಹುದುಗಿ ಹೋಗಿರುವ ರಾಜ್ಯದ ಇಂತಹ ಪಾರಂಪರಿಕ ಜಲಮೂಲಗಳನ್ನು ಪತ್ತೆ ಹಚ್ಚಿ ಅವುಗಳನ್ನು ವಿವಿಧ ವಿಶ್ವ ವಿದ್ಯಾನಿಲಯಗಳ ಎನ್ ಸಿ ಸಿ, ಎನ್ ಎಸ್ ಎಸ್ ಸ್ವಯಂ ಸೇವಕರ ಸಹಕಾರದೊಂದಿಗೆ ಪುನರುಜ್ಜೀವನ ಗೊಳಿಸಲು ಮುಂದಾಗುವ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅನಂತ ಅಸ್ತ್ರ ಫೌಂಡೇಶನ್ ನ ನಿರ್ದೇಶಕ ಆಕಾಶ್, ಸಿಎಂಆರ್ ವಿಶ್ವ ವಿದ್ಯಾನಿಲಯದ ಲೆಫ್ಟಿನಂಟ್ ಡಾ.ಅರುಣ್ ಕುಮಾರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಿಎಂಆರ್ ವಿಶ್ವ ವಿದ್ಯಾನಿಲಯದ ಎನ್ ಸಿ ಸಿ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರಿದ್ದರು.
