






ಸೆಪ್ಟೆಂಬರ್ 1ರಂದು ಧರ್ಮಸ್ಥಳದಲ್ಲಿ ಧರ್ಮ ರಕ್ಷಣಾ ಸಮಾವೇಶ : ಎಸ್ ಆರ್ ವಿಶ್ವನಾಥ್
1 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ :
ಯಲಹಂಕ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಂಕಲ್ಪದ ಕರೆಯ ಮೇರೆಗೆ ಸೆ.1ರಂದು ಧರ್ಮಸ್ಥಳದಲ್ಲಿ ‘ಧರ್ಮ ರಕ್ಷಿಸಿ, ಧರ್ಮಸ್ಥಳ ಉಳಿಸಿ’ ಶೀರ್ಷಿಕೆಯ ಅಡಿಯಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದ್ದು, ಈ ಸಮಾವೇಶದಲ್ಲಿ ರಾಜ್ಯದ ವಿವಿಧ ವಿಧಾನ ಸಭಾ ಕ್ಷೇತ್ರಗಳಿಂದ ಆಗಮಿಸುವ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳಲಿ ದ್ದಾರೆ ಎಂದು ಯಲಹಂಕ ಶಾಸಕರು, ಸಮಾವೇಶದ ಸಂಚಾಲಕರಾದ ಎಸ್ ಆರ್ ವಿಶ್ವನಾಥ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಹಾಲು ಮಹಾಮಂಡಳಿ (ಕೆಎಂಎಫ್), ಬೆಂಗಳೂರು ಸಹಕಾರ ಹಾಲು ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಯಲಹಂಕ ಕ್ಷೇತ್ರದ ರಾಜಾನುಕುಂಟೆಯಲ್ಲಿರುವ ಬೆಂಗಳೂರು ಉತ್ತರ ಶಿಬಿರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಹಾಲು ಉತ್ಪಾದಕರು, ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವಾಹಕರಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ‘ ಧರ್ಮಸ್ಥಳದ ಬಗ್ಗೆ ಕಳೆದ ಕೆಲವು ದಿನಗಳಿಂದ ನಿರಂತರ ಅಪಪ್ರಚಾರ ನಡೆಸಲಾಗಿತ್ತು, ಇದರ ವಿರುದ್ಧ ಜಾಗೃತಿ ಮೂಡಿಸುವ ಮೂಲಕ ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂಬ ಸಂಕಲ್ಪದೊಂದಿಗೆ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಯಲಹಂಕ ಕ್ಷೇತ್ರದಿಂದ ಸುಮಾರು 500 ಕಾರುಗಳಲ್ಲಿ ಧರ್ಮಯಾತ್ರೆ ನಡೆಸಿದ್ದೆವು. ನಂತರದ ದಿನಗಳಲ್ಲಿ ಎಸ್ಐಟಿ ಮೂಲಕ ಧರ್ಮಸ್ಥಳದ ವಿರುದ್ಧ ನಡೆದ ಷಡ್ಯಂತ್ರ ಬಯಲಾಗುತ್ತಾ ಬಂದಿದೆ. ಇಂತಹ ಸಂದರ್ಭದಲ್ಲಿ ಧರ್ಮ ಸಂರಕ್ಷಣಾ ಯಾತ್ರೆಯ ಮುಂದುವರಿದ ಭಾಗವಾಗಿ ಸೆ.1ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಂಕಲ್ಪದ ಕರೆಯ ಮೇರೆಗೆ ಧರ್ಮಸ್ಥಳದಲ್ಲಿ ‘ಧರ್ಮ ರಕ್ಷಿಸಿ, ಧರ್ಮಸ್ಥಳ ಉಳಿಸಿ’ ಶೀರ್ಷಿಕೆಯ ಅಡಿಯಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದ್ದು, ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿಧಾನ ಸಭಾ ಕ್ಷೇತ್ರಗಳಿಂದ ಸುಮಾರು ಐದು ಸಾವಿರ ಬಸ್ ಗಳಲ್ಲಿ ಒಂದು ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ. ಆ.31ರಂದು ರಾಜ್ಯದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು ಇಪ್ಪತ್ತು ಸಾವಿರ ಮಂದಿ ತೆರಳಲಿದ್ದು, ಅವರಿಗೆ ಧರ್ಮಸ್ಥಳದಲ್ಲಿ ಊಟ, ವಸತಿ, ಮಂಜುನಾಥಸ್ವಾಮಿ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಸೆ. 1ರ ಬೆಳಿಗ್ಗೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಂದ ಹೊರಡಲಿರುವ ಜನರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಾವೇಶ ಸೆ. 1ರ ಮಧ್ಯಾಹ್ನ 1ಗಂಟೆಗೆ ಆರಂಭವಾಗಲಿದ್ದು, ಸಕಾಲಕ್ಕೆ ಜನತೆ ಆಗಮಿಸಬೇಕು. ಈ ಬೃಹತ್ ಸಮಾರಂಭದಲ್ಲಿ ರಾಜ್ಯದ ವಿವಿಧ ವಿಧಾನ ಸಭಾ ಕ್ಷೇತ್ರಗಳ ಬಿಜೆಪಿ ಶಾಸಕರು, ಸಂಸದರು, ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಅದಸ್ಯರು ರಾಜ್ಯದ ಮಾಜಿ ಸಚಿವರು, ಕೇಂದ್ರ ಸಚಿವರು ಸೇರಿದಂತೆ ಮಹೋನ್ನತ ಗಣ್ಯರು ಪಾಲ್ಗೊಳ್ಳಲಿದ್ದು, ಸಮಾವೇಶ ಪೂರ್ಣಗೊಂಡ ಬಳಿಕ ತಮ್ಮ ಸ್ಥಳಕ್ಕೆ ವಾಪಸಾಗಲಿದ್ದಾರೆ. ಈಗಾಗಲೇ ಸಮಾವೇಶಕ್ಕಾಗಿ ಧರ್ಮಸ್ಥಳದಲ್ಲಿ ಬೃಹತ್ ಪೆಂಡಾಲ್ ಸಿದ್ಧಗೊಳಿಸಲಾಗುತ್ತಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಮಾತನಾಡಿ ‘ಬೆಂಗಳೂರು ಜಿಲ್ಲಾ ವ್ಯಾಪ್ತಿಯ ಹಾಲು ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು ಮತ್ತು ಮುಖ್ಯ ಕಾರ್ಯ ನಿರ್ವಾಹಕರಿಗಾಗಿ ಒಂದು ದಿನದ ತರಬೇತಿ ಶಿಬಿರ ಆಯೋಜಿಸಿದ್ದು, ಒಕ್ಕೂಟದ ಏಳಿಗೆ, ಗುಣಮಟ್ಟದ ಹಾಲು ಸಂಗ್ರಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಶಿಬಿರದಲ್ಲಿ ತರಬೇತಿ ನೀಡಲಾಗು ತ್ತಿದೆ. ಧರ್ಮಸ್ಥಳ ಸಂಘ ಯಲಹಂಕ ಕ್ಷೇತ್ರದಲ್ಲಿ ಹಲವು ಕೆರೆಗಳು ಮತ್ತು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದೆ, ಗುಡಿ ಕೈಗಾರಿಕೆ ಕೈಗೊಳ್ಳ ಲಿಚ್ಛಿಸುವ ಮಹಿಳೆಯರಿಗೆ ನೆರವಿನ ಹಸ್ತ ನೀಡಿ ಬದುಕು ರೂಪಿಸುವ ಸತ್ಕಾರ್ಯವನ್ನು ಮಾಡಿದೆ, ಇಂತಹ ಧರ್ಮಸ್ಥಳದ ಉಳಿವಿಗಾಗಿ ಧರ್ಮಸ್ಥಳ ದೊಂದಿಗೆ ನಾವಿದ್ದೇವೆ ಎಂಬ ಸಂಕಲ್ಪದೊಂದಿಗೆ ಸೆ.1ರಂದು ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು,ನಿರ್ದೇಶಕರು ಮತ್ತು ಹಾಲು ಉತ್ಪಾದಕ ರೈತರು ತೆರಳುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡೈರಿ ಉದ್ಯೋಗಗಳಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ಶೇ.50% ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಶೇಕಡಾ 20%ರಷ್ಟು ಮೀಸಲಾತಿ ನೀಡ ಬೇಕೆಂದು ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ನಿರ್ದೇಶಕ ಸತೀಶ್ ಕಡತನಮಲೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮರಣ ಹೊಂದಿದ್ದ 69 ವರ್ಷ ಮೇಲ್ಪಟ್ಟ ಸಹಕಾರ ಸಂಘದ ಸದಸ್ಯರ ಕುಟುಂಬಸ್ಥ ರಿಗೆ ಮರಣ ಪರಿಹಾರದ ಚೇಕ್, ವಿಶೇಷ ಪರಿಹಾರದ ಚೆಕ್. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಚೆಕ್ ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಬೆಂ.ನಗರ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ವಿಜಯಕುಮಾರ್, ಯಲಹಂಕ ತಾಲ್ಲೂಕು ಸೊಸೈಟಿ ಉಪಾಧ್ಯಕ್ಷ ಎ.ತಿಮ್ಮರಾಯಿಗೌಡ ಸೇರಿದಂತೆ ಹಾಲು , ತಾ.ಪಂ.ಮಾಜಿ ಅಧ್ಯಕ್ಷ ಮುನಿದಾಸಪ್ಪ, ಅರಕೆರೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ಶಿವಕೋಟೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕೆ.ಪಿ.ಮಂಜುನಾಥ್ ಸೇರಿದಂತೆ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರಿದ್ದರು.