







ಡೈರಿ ಉದ್ಯೋಗಗಳಲ್ಲಿ ಹಾಲು ಉತ್ಪಾದಕರು, ಸಿಬ್ಬಂದಿಗಳ ಮಕ್ಕಳಿಗೆ ಆಧ್ಯತೆ ನೀಡಲು ಮನವಿ :
ಬ್ಯಾಟರಾಯನಪುರ : ಡೈರಿ ಉದ್ಯೋಗಗಳಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ಶೇ.50% ಮತ್ತು ಡೈರಿ ಉದ್ಯೋಗಿಗಳ ಮಕ್ಕಳಿಗೆ ಶೇ.20 ರಷ್ಟು ಮೀಸಲಾತಿ ನೀಡುವಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಹಾಲು ಉತ್ಪಾದಕ ರೈತರು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅವರಿಗೆ ಮನವಿ ಸಲ್ಲಿಸಿದರು.
ಜಾಲ ಹೋಬಳಿ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವಾಹಕರ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ಬೊಯಿಲಹಳ್ಳಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಬೆಂ.ಸಹಕಾರ ಹಾಲು ಒಕ್ಕೂಟ(ಬಮೂಲ್) ನಿರ್ದೇಶಕ ಸತೀಶ್ ಕಡತನಮಲೆ ಅವರು ಮಾತನಾಡಿ ‘ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಉತ್ತಮ ಗುಣಮಟ್ಟದ ಹಾಲು ಶೆಖರಣೆ ಮಾಡಬೇಕು. ಸಹಕಾರ ಸಂಘಗಳಲ್ಲಿ ಲೆಕ್ಕ ಪುಸ್ತಕಗಳ ನಿರ್ವಹಣೆ ಹೆಚ್ಚು ಪಾರದರ್ಶಕವಾಗಿರಬೇಕು. ರಾಸುಗಳ ತಳಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಮತ್ತು ಬಮೂಲ್ ನಿಂದ ಸಿಗುವ ಅನುದಾನ ಮತ್ತು ಸೌಲಭ್ಯಗಳ ಸದುಪಯೋಗವನ್ನು ಹಾಲು ಉತ್ಪಾದಕ ರೈತರು ಪಡೆದುಕೊಂಡು ಆದಾಯವನ್ನು ದ್ವಿಗುಣ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಂತರ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯಕಾರಿ ಮಂಡಳಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳು ಜೊತೆ ಸಮಾಲೋಚನೆ ನಡೆಸಿ, ಸಂಘದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಭೆ ಸಮಾರಂಭ ಇದ್ದಲ್ಲಿ ನಂದಿನಿ ಉತ್ಪನ್ನಗಳನ್ನು ಮಾತ್ರ ಬಳಸುವಂತೆ ಉತ್ತೇಜಿಸುವ ಮೂಲಕ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಏಳಿಗೆಗೆ ಶ್ರಮಿಸಬೇಕೆಂದು ಕಿವಿ ಮಾತು ಹೇಳಿದರು. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ದೊಡ್ಡಬಸವರಾಜು, ದೀಪು(ಸತ್ಯನಾರಾಯಣ), ಬಿ.ಕೆ.ರವೀಂದ್ರನಾಥ ಗೌಡ, ಏ.ನಾಗರಾಜ್ ಸೇರಿದಂತೆ ಜಾಲ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯಕಾರಿ ಮಂಡಳಿಯ ಸದಸ್ಯರು, ಹಾಲು ಉತ್ಪಾದಕರ ಸದಸ್ಯರು, ಸಂಘದ ಸಿಬ್ಬಂದಿ ವರ್ಗದವರಿದ್ದರು.