ಧರ್ಮಸ್ಥಳ ನಮ್ಮ ಧಾರ್ಮಿಕ ಅಸ್ಮಿತೆ ಅದರೊಟ್ಟಿಗೆ ಸದಾ ಇರುತ್ತೇವೆ : ಸತೀಶ್ ಕಡತನಮಲೆ
130 ಬಸ್ ಗಳಲ್ಲಿ ಧರ್ಮಸ್ಥಳ ಸಮಾವೇಶಕ್ಕೆ ತೆರಳಿದ ಹಾ.ಉ. ಸಹಕಾರ ಸಂಘದ ಆದ್ಯಕ್ಷರು, ಸದಸ್ಯರು, ಹಾಲು ಉತ್ಪಾದಕರು :
ಯಲಹಂಕ : ಧರ್ಮಸ್ಥಳದ ಮಂಜುನಾಥಸ್ವಾಮಿ ಹಿಂದೂ ದೇವರು ಎನ್ನುವುದಕ್ಕಿಂತ ಅದು ನಮ್ಮ ಧಾರ್ಮಿಕ ಅಸ್ಮಿತೆ, ಅದರೊಂದಿಗೆ ಇಂದು, ಮುಂದು, ಎಂದೆಂದೂ ನಾವು ಇರುತ್ತೇವೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮೂಲ್)ದ ನಿರ್ದೇಶಕ ಸತೀಶ್ ಕಡತನಮಲೆ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಯಲಹಂಕ ಶಾಸಕರು, ಧರ್ಮರಕ್ಷಣಾ ಸಮಾವೇಶದ ಸಂಚಾಲಕರಾದ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಸೋಮವಾರ ಧರ್ಮಸ್ಥಳದಲ್ಲಿ ನಡೆಯಲಿರುವ ಧರ್ಮ ರಕ್ಷಣಾ ಸಮಾವೇಶಕ್ಕೆ ಬಮೂಲ್ ಬೆಂಗಳೂರು ಉತ್ತರ ಕ್ಷೇತ್ರ ಮತ್ತು ನೆಲಮಂಗಲ ಕ್ಷೇತ್ರಗಳಿಂದ ತೆರಳಿದ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಹಾಲು ಉತ್ಪಾದಕರ ಪ್ರಯಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಯಲಹಂಕ ಕ್ಷೇತ್ರದಿಂದ ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಸುಮಾರು 10 ಸಾವಿರ ಜನ ಧರ್ಮಸ್ಥಳ ಸಮಾವೇಶಕ್ಕೆ ತೆರಳುತ್ತಿದ್ದು, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಬೆಂಗಳೂರು ಉತ್ತರ ಮತ್ತು ನೆಲಮಂಗಲ ಕ್ಷೇತ್ರಗಳಿಂದ ಹಾ.ಉ.ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಹಾಲು ಉತ್ಪಾದಕರು ಸೇರಿದಂತೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನ ತೆರಳುತ್ತಿದ್ದೇವೆ. ಈಗಾಗಲೇ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳಲು ಧರ್ಮಸ್ಥಳಕ್ಕೆ ತೆರಳಿದ್ದು, ಅವರ ಮಾರ್ಗದರ್ಶನದ ಮೇರೆಗೆ ನಾವು ತೆರಳುತ್ತಿದ್ದೇವೆ. ಮಾರ್ಗದುದ್ದಕ್ಕೂ ಯಾತ್ರಾರ್ಥಿಗಳಿಗೆ ಊಟ, ತಿಂಡಿ, ಉಪಹಾರ, ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಧರ್ಮಸ್ಥಳ ಸಂಘ ಯಲಹಂಕ ಕ್ಷೇತ್ರದ ಹಲವು ಕೆರೆಗಳು, ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಸ್ತ್ರೀಶಕ್ತಿ ಸಂಘಗಳಿಗೆ ಗುಡಿ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳನ್ನು ಪ್ರಾರಂಭಿಸಲು ಅಗತ್ಯ ಆರ್ಥಿಕ ನೆರವು ನೀಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಹಕರಿಸಿದೆ, ಇಂತಹ ಧರ್ಮಸ್ಥಳದ ಪಾವಿತ್ರ್ಯತೆಯನ್ನು ಕೆಲ ದುಷ್ಟಶಕ್ತಿಗಳು ಹಾಳು ಮಾಡುವ ವ್ಯರ್ಥ ಪ್ರಯತ್ನ ಮಾಡುತ್ತಿರುವ ಇಂತಹ ವೇಳೆಯಲ್ಲಿ ಧರ್ಮರಕ್ಷಣಾ ಸಮಾವೇಶದ ಮೂಲಕ ತಕ್ಕ ಉತ್ತರ ನೀಡುತ್ತಿರುವುದು ಅತ್ಯುತ್ತಮವಾದ ಬೆಳವಣಿಗೆಯಾಗಿದೆ. ಧರ್ಮಸ್ಥಳದ ಮಂಜುನಾಥಸ್ವಾಮಿ ಕೇವಲ ನಮ್ಮ ದೇವರು ಮಾತ್ರವಲ್ಲ, ಅದು ನಮ್ಮ ಧಾರ್ಮಿಕ ಅಸ್ಮಿತೆಯಾಗಿದ್ದು, ಅದರೊಂದಿಗೆ ಇಂದು, ಮುಂದು, ಎಂದೆಂದಿಗೂ ನಾವಿರುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಬಮೂಲ್ ನೆಲಮಂಗಲ ಕ್ಷೇತ್ರದ ನಿರ್ದೇಶಕ ಬೈರೇಗೌಡ ಸೇರಿದಂತೆ ಬೆಂಗಳೂರು ಉತ್ತರ ಮತ್ತು ನೆಲಮಂಗಲ ಕ್ಷೇತ್ರದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಹಾಲು ಉತ್ಪಾದಕರು ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *