ಸಿಂಗನಾಯಕನಹಳ್ಳಿ ಗ್ರಾಮದ ಸಾಧಕ ರೈತರಿಗೆ ‘ರೈತರತ್ನ ಪ್ರಶಸ್ತಿ’ ಪುರಸ್ಕಾರ :

ಶ್ರೀ ವಿನಾಯಕ ಗೆಳೆಯರ ಬಳಗದಿಂದ ಆಯೋಜನೆ :

ಯಲಹಂಕ : ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣೇಶೋತ್ಸವದ ಕೊನೆಯ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಅನುಪಮ ಸಾಧನೆ ಮಾಡಿದ ಗ್ರಾಮದ ಹಲವು ಸಾಧಕ ರೈತರಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಅವರು ‘ರೈತರತ್ನ’ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದರು.

ಇದೇ ವೇಳೆ ಮಾತನಾಡಿದ ಶಾಸಕರು ‘ನಗರೀಕರಣ ಪ್ರಭಾವದಿಂದಾಗಿ ಕೃಷಿ ಚಟುವಟಿಕೆ ಮರಿಚಿಕೆಯಾಗುತ್ತಿರುವ ಇಂದಿನ ಸಂಕಷ್ಟದ ದಿನಗಳಲ್ಲಿಯೂ ಸಹ ಕೃಷಿಯನ್ನೇ ತಮ್ಮ ನೆಚ್ಚಿನ ವೃತ್ತಿಯನ್ನಾಗಿ ಸ್ವೀಕರಿಸಿ, ಕೃಷಿಯಲ್ಲಿ ಅನುಪಮ ಸಾಧನೆ ಮಾಡುತ್ತಿರುವ ಸಿಂಗನಾಯಕನಹಳ್ಳಿ ಗ್ರಾಮದ ರೈತರ ಕೊಡುಗೆ ಪ್ರಶಂಸಾರ್ಹವಾದುದು. ಇಂಥವರನ್ನು ಗೌರವಿಸುವ ಮೂಲಕ ಉತ್ತೇಜಿಸುವ ಸತ್ಕಾರ್ಯವನ್ನು ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗ ಮಾಡುತ್ತಿರುವುದು ಸ್ತುಸ್ತ್ಯಾರ್ಹವಾದ ಕೆಲಸ, ಗೆಳೆಯರ ಬಳಗದ ಈ ಕಾರ್ಯವನ್ನು ಅಭಿನಂದಿಸುತ್ತೇನೆ, ಸಂಘದ ಇಂತಹ ಜನಾನುರಾಗಿ ಕಾರ್ಯಗಳಿಗೆ ನನ್ನ ಬೆಂಬಲ, ಅಗತ್ಯ ಸಹಕಾರ ಸದಾ ಇರಲಿದೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡ ಎಸ್.ಎನ್.ರಾಜಣ್ಣ, ಹೆಸರಘಟ್ಟ ಹೋಬಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶ್ರೀ ವಿನಾಯಕ ಗೆಳೆಯರ ಬಳಗದ ಮುಖ್ಯ ಸಂಚಾಲಕ ಎಸ್.ಜಿ.ಪ್ರಶಾಂತ್ ರೆಡ್ಡಿ, ಸಿಂಗನಾಯಕನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಟಿ.ಮುನಿರೆಡ್ಡಿ, ಯಲಹಂಕ ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಎಸ್.ಆರ್.ಜನಾರ್ಧನ್, ಆರ್ ಎಸ್ ಎಸ್ ಎನ್ ಬ್ಯಾಂಕ್ ನಿರ್ದೇಶಕ ರಾಮಚಂದ್ರರೆಡ್ಡಿ, ಬಿಜೆಪಿ ಮುಖಂಡ ಶಿವಾನಂದ, ಮುನಿಕೃಷ್ಣ, ಗ್ರಾ.ಪಂ.ಸದಸ್ಯರಾದ ಕೆ.ಬಾಬು, ಮಲ್ಲೇಶ್, ಶ್ರೀ ವಿನಾಯಕ ಗೆಳೆಯರ ಬಳಗದ ಪದಾಧಿಕಾರಿಗಳು, ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಶ್ರೀಶೈಲಮೂರ್ತಿ ಸೇರಿದಂತೆ ಗ್ರಾಮಸ್ಥರಿದ್ದರು.

ಕಾರ್ಯಕ್ರಮದ ಬಳಿಕ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಗಣೇಶ ಮೂರ್ತಿಯನ್ನು ವಿವಿಧ ಜಾನಪದ ಕಲಾತಂಡಗಳ ಕಲಾ ಪ್ರದರ್ಶನದ ನಡುವೆ ಅದ್ಧೂರಿಯಾಗಿ ಮೆರವಣಿಗೆ ಮಾಡಿ ಗಣೇಶನನ್ನು ವಿಸರ್ಜಿಸಲಾಯಿತು.

Leave a Reply

Your email address will not be published. Required fields are marked *