ಅಟ್ಟೂರು, ಯಲಹಂಕ ಉಪನಗರ ವಾರ್ಡ್ ಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಎಸ್ ಆರ್ ವಿಶ್ವನಾಥ್ :
ಯಲಹಂಕ : ಯಲಹಂಕ ನಗರ ವ್ಯಾಪ್ತಿಯ ಅಟ್ಟೂರು ವಾರ್ಡ್ 3 ಮತ್ತು ಯಲಹಂಕ ಉಪನಗರ ವಾರ್ಡ್ 4ರಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ, ಮತ್ತು ಸ್ಯಾನಿಟರಿ ಕೋರ್ ಸೇರಿದಂತೆ ಸೇರಿದಂತೆ ಸುಮಾರು 12 ಕೋಟಿ ರು.ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಶುಕ್ರವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ‘ಯಲಹಂಕ ನಗರದ ವ್ಯಾಪ್ತಿಯ ಅಟ್ಟೂರು ವಾರ್ಡ್ 3ರ ವ್ಯಾಪ್ತಿಯ ಅನಂತಪುರ, ಬಾಲಾಜಿ ಲೇಔಟ್, ಆಂದ್ರ ಲೇಔಟ್, ಅಟ್ಟೂರು ಲೇಔಟ್, ಎಸ್ಕಾರ್ಟ್ ಇಂಜಿನಿಯರಿಂಗ್ ಲೇಔಟ್, ಬಿಎಚ್ಇಎಲ್ ಲೇಔಟ್, ಹರಿರಾಜ ಲೇಔಟ್, ಅಯ್ಯಪ್ಪ ಲೇಔಟ್, ಆದಿತ್ಯ ನಗರ ಫೇಸ್ 1, ಭರತ್ ನಗರ, ಎಂ ಎಸ್ ಪಾಳ್ಯ, ಸಾಯಿನಗರ ಫೇಸ್ 1 ನಲ್ಲಿ ಮುಖ್ಯ ರಸ್ತೆ, ಅಡ್ಡರಸ್ತೆಗಳ ಅಭಿವೃದ್ಧಿ ಕಾಮಗಾರಿ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಂತೆಯೇ ಯಲಹಂಕ ಉಪನಗರ ವಾರ್ಡ್ 4ರ ವ್ಯಾಪ್ತಿಯ ಮಾತೃ ಬಡಾವಣೆಯಿಂದ ಶಾರದಾ ನಗರದವರೆಗೆ ಸಂಪರ್ಕ ಕಲ್ಪಿಸುವ ಚರಂಡಿ ಅಭಿವೃದ್ಧಿ ಕಾಮಗಾರಿ, ಚಿಕ್ಕಬೊಮ್ಮಸಂದ್ರದಲ್ಲಿ ಸ್ಯಾನಿಟರಿ ಕೋರ್ ಕಾಮಗಾರಿ, ಚಿಕ್ಕಬೊಮ್ಮಸಂದ್ರ, ಸೋಮೇಶ್ವರನಗರ, ಅಳ್ಳಾಳಸಂದ್ರ, ಅಳ್ಳಾಳಸಂದ್ರದ ಎಸ್ಸಿ ಎಸ್ಟಿ ಪಂಗಡದವರು ವಾಸಿಸುವ ಪ್ರದೇಶ, ಅಂಬೇಡ್ಕರ್ ನಗರ, ಕನಕ ನಗರ, ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ರಸ್ತೆ, ಎಲ್.ಬಿ.ಎಸ್.ನಗರ ಗಳಲ್ಲಿ ಮುಖ್ಯ ರಸ್ತೆ ಮತ್ತು ಅಡ್ಡರಸ್ತೆಗಳ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಸುಮಾರು 12 ಕೋಟಿ ರು.ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಭೂಮಿಪೂಜೆ ನೆರವೇರಿಸಲಾಗಿದೆ. ರಾಜ್ಯ ಸರ್ಕಾರದ ಅನುದಾನದ ಕೊರತೆಯ ನಡುವೆಯೂ ಯಲಹಂಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಟಿತ ವಾಗದಂತೆ ಕಾಳಜಿ ವಹಿಸಲಾಗಿದೆ.
ರಾಜ್ಯ ಸರ್ಕಾರ ರಸ್ತೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಮತ್ತು ಅನಾದರದ ಬಗ್ಗೆ ಬೇಸರವಿದೆ. ನಗರದೆಲ್ಲೆಡೆ ಗುಂಡಿ ತುಂಬಿದ ರಸ್ತೆಗಳೇ ಕಂಡು ಬರುತ್ತಿವೆ. ರಾಜ್ಯದಲ್ಲೇ ಅತಿ ಹೆಚ್ಚು ತೆರಿಗೆ ಕಟ್ಟುವ ಬೆಂಗಳೂರು ನಗರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚು ಗಮನ ಹರಿಸಬೇಕಿದೆ. ಇಂತಹ ಗುಂಡಿಯುಕ್ತವಾದ ರಸ್ತೆಗಳನ್ನು ಇಟ್ಟುಕೊಂಡು, ಬಿಬಿಎಂಪಿ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕರು ಅದ್ಯಾವ ನಿರ್ಲಜ್ಯ ಮುಖವಿಟ್ಟುಕೊಂಡು ಜನರ ಬಳಿ ಮತ ಕೇಳಲು ಹೋಗುತ್ತಾರೋ ಎಂದು ಟೀಕಾ ಪ್ರಹಾರ ಮಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ಪಕ್ಷದ ಶಾಸಕರಿರುವ ಕ್ಷೇತ್ರಗಳಿಗೆ 50 ಕೋಟಿ, ವಿಪಕ್ಷದ ಶಾಸಕರಿರುವ ಶಾಸಕರ ಕ್ಷೇತ್ರಗಳಿಗೆ 25 ಕೋಟಿ ರು ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದರು ಆದರೆ ಇದುವರೆಗೂ ಒಂದು ಬಿಡಿಗಾಸು ಸಹ ಬಿಡುಗಡೆ ಮಾಡಿಲ್ಲ. ಅನುದಾನದ ಕೊರತೆಯ ಬಗ್ಗೆ ಕಾಂಗ್ರೆಸ್ ಶಾಸಕರೇ ರಾಜ್ಯ ಸರ್ಕಾರವನ್ನು ಛೀಮಾರಿ ಹಾಕುವ ಹಂತ ತಲುಪಿದ್ದಾರೆ. ಯಲಹಂಕ ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ನಗರದ ಬೆಳವಣಿಗೆಗೆ ತಕ್ಕಂತೆ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕಾದ ಗುರುತರ ಹೊಣೆ ನಮ್ಮ ಮೇಲಿದೆ, ಸರ್ಕಾರ ಅಭಿವೃದ್ಧಿಗೆ ಹಣ ನೀಡದಿದ್ದರೆ ಕ್ಷೇತ್ರದ ಜನತೆಗೆ ಮುಖ ತೋರಿಸುವುದು ಕಷ್ಟವಾಗುತ್ತದೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇದನ್ನು ಮನಗಂಡು ಯಲಹಂಕ ನಗರದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಬೇಕೆಂದು ಮನವಿ ಮಾಡಿದರು‌. ಇದುವರೆಗೂ ನಿರಂತರವಾಗಿ ಅಭಿವೃದ್ಧಿ ಪಡಿಸಿಕೊಂಡು ಬರಲಾಗುತ್ತಿದ್ದ ಕಾಮಗಾರಿಗಳ ಯಥಾ ನಿರ್ವಹಣೆ ಸಹ ಅನುದಾನದ ಕೊರತೆಯಿಂದ ಕಷ್ಟಸಾಧ್ಯವಾಗಿದೆ ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಯಲಹಂಕ ನಗರ ಮಂಡಲ ಬಿಜೆಪಿ ಪ್ರಭಾರ ಅಧ್ಯಕ್ಷ ಮುರಾರಿರಾಮು, ಪ್ರಧಾನ ಕಾರ್ಯದರ್ಶಿ ವಿ.ಪವನ್ ಕುಮಾರ್, ಬಿಬಿಎಂಪಿ ಮಾಜಿ ಸದಸ್ಯ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಎಂ.ಮುನಿರಾಜು, ಮಾಜಿ ಅಧ್ಯಕ್ಷ ಮಧುಸೂದನ್, ಅಟ್ಟೂರು ವಾರ್ಡ್ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ, ಯಲಹಂಕ ಉಪನಗರ ವಾರ್ಡ್ ಅಧ್ಯಕ್ಷ ರಾಜಣ್ಣ, ಬಿಜೆಪಿ ಮುಖಂಡರಾದ ಎ.ಸಿ‌.ಮುನಿಕೃಷ್ಣಪ್ಪ, ವೈ.ಜಿ.ವಸಂತ್, ಮುರಳಿ ನಾಯ್ಡು, ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್.ಕಿರಣ್, ಅರವಿಂದ್, ಯಲಹಂಕ ಜಯಣ್ಣ, ಅಕ್ಷತ್, ಶರತ್, ಅನಿಲ್, ಕಾರ್ತೀಕ್, ಲೋಕೇಶ್, ಆಕಾಶ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *