










ಜೇನು ಕೃಷಿ ಪ್ರತ್ಯೇಕ ಆದಾಯದ ಜೊತೆಗೆ ಕೃಷಿ ಇಳುವರಿ ಹೆಚ್ಚಿಸಲು ಸಹಕಾರಿ : ಡಾ.ಶಿವರಾಮ್
ಜಿಕೆವಿಕೆಯಲ್ಲಿ ನಡೆದ ರಾಜ್ಯ ಮಟ್ಟದ ಜೇನು ಕೃಷಿ ತರಬೇತಿ ಶಿಬಿರ :
ಬ್ಯಾಟರಾಯನಪುರ : ಜೇನು ಕೃಷಿ ಪ್ರತ್ಯೇಕ ಆದಾಯದ ಜೊತೆಗೆ ಕೃಷಿ ಇಳುವರಿಯನ್ನು ಹೆಚ್ವಿಸಲು ಸಹಕಾರಿಯಾಗುತ್ತದೆ ಎಂದು ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ.ಶಿವರಾಮ್ ತಿಳಿಸಿದರು.
ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ, ಅಖಿಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜನೆ ಹಾಗೂ ಬೆಂ.ಕೃಷಿ ವಿ.ವಿ.ಯ ಜೇನು ಕೃಷಿ ವಿಭಾಗ ಇವರ ಸಹಯೋಗ ದೊಂದಿಗೆ ನಗರದ ಜಿಕೆವಿಕೆ ಜೇನು ಕೃಷಿ ವಿಭಾಗದ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಜೇನು ಸಾಕಾಣಿಕೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಜೇನು ಕೃಷಿ ತರಬೇತಿ ಪಡೆದ ಕೃಷಿಕರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು ‘ಜೇನು ಕೃಷಿಯಿಂದ ಜೇನು ಉತ್ಪಾದನೆಯ ಜೊತೆಗೆ ಕೃಷಿ ಬೆಳೆಗಳಲ್ಲಿ ಹೆಚ್ಚಿನ ಪರಾಗಸ್ಪರ್ಶ ಉಂಟಾಗಿ, ಕೃಷಿ ಉತ್ಪಾದನೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ. ಸಂಶೋಧನಾ ವರದಿಗಳ ಪ್ರಕಾರ ಕೃಷಿಯೊಂದಿಗೆ ಜೇನು ಕೃಷಿ ಮಾಡುವುದರಿಂದ ಶೇಕಡಾ 15ರಿಂದ 20% ರಷ್ಟು ಕೃಷಿ ಇಳುವರಿ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವಿದೆ. ಕಳೆದ ಎರಡು ದಿನಗಳ ಕಾಲ ನಡೆದ ತರಬೇತಿ ಶಿಬಿರವು ಕೃಷಿಕರು ಇಲ್ಲಿ ಪಡೆದ ಜ್ಞಾನ ಮತ್ತು ಕೌಶಲ್ಯವನ್ನು ಪ್ರಾಯೋಗಿಕವಾಗಿ ವಿಸ್ತರಿಸಲು ಇದೊಂದು ದೀಕ್ಷಾರಂಭ ಮತ್ತು ಕೌಶಲ್ಯ ವರ್ಗಾವಣೆ ಎನ್ನಬಹುದು ಎಂದರು.
ಕಾರ್ಯಕ್ರಮದಲ್ಲಿ ಜೇನು ಕೃಷಿ ತರಬೇತಿ ಪಡೆದ ರಾಜ್ಯದ ವಿವಿಧ ಜಿಲ್ಲೆಗಳ ರೈತರಿಗೆ ತರಬೇತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿ.ವಿ.ಜೇನು ಕೃಷಿ ವಿಜ್ಞಾನಿಗಳಾದ ಡಾ.ಕೆ.ಟಿ.ವಿಜಯಕುಮಾರ್, ಡಾ.ಜಿ.ಈಶ್ವರಪ್ಪ, ಪ್ರಾಧ್ಯಾಪಕರಾದ ಡಾ.ಕೆ.ಎಸ್. ಜಗದೀಶ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರಿದ್ದರು.
