


‘ಪವರ್ ಗ್ರಿಡ್’ ಸಂಸ್ಥೆ ವತಿಯಿಂದ ಭಷ್ಟಾಚಾರದ ವಿರುದ್ಧ ಜಾಗೃತಿ ಜಾಥಾ :
ಯಲಹಂಕ : ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಎಂಬುದು ಕೇವಲ ಕೆಲವರ ಜವಾಬ್ದಾರಿಯಲ್ಲ, ಅದು ದೇಶದ ಪ್ರತಿ ಪ್ರಜೆಯ ನಾಗರೀಕ ಪ್ರಜ್ಞೆಯಾಗಬೇಕು ಎಂದು ‘ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ’ ದಕ್ಷಿಣ ಪ್ರಾಂತ್ಯ(2) ಮುಖ್ಯ ವ್ಯವಸ್ಥಾಪಕ ಮುಕುಂದ್ ಶರದ್ ಹೆಜಿಬ್ ಅಭಿಪ್ರಾಯಪಟ್ಟರು.
ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಯಲ್ಲಿರುವ ‘ಪವರ್ ಗ್ರಿಡ್’ ಸಂಸ್ಥೆಯ ದಕ್ಷಿಣ ಪ್ರಾಂತ್ಯ-2ರ ವತಿಯಿಂದ ‘ಜಾಗೃತಿ ಅರಿವು ಸಪ್ತಾಹ’ದ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಪವರ್ ಗ್ರಿಡ್’ ಸಂಸ್ಥೆ ಪ್ರತಿ ವರ್ಷ ಜಾಗೃತಿ ಅರಿವು ಸಪ್ತಾಹ’ದ ಅಂಗವಾಗಿ ಜನಜಾಗೃತಿ ಜಾಥಾ ಆಯೋಜಿಸುತ್ತಾ ಬಂದಿದ್ದು, ಅಂದು ಭ್ರಷ್ಟಾಚಾರದ ವಿರುದ್ಧ ಜಾಥಾ, ಕರಪತ್ರ ವಿತರಣೆ, ಬೀದಿ ನಾಟಕ ಸೇರಿದಂತೆ ವಿವಿಧ ರೀತಿಯಲ್ಲಿ ಜನಜಾಗೃತಿ ಮೂಡಿಸುತ್ತಿದೆ. ಹಾಗೆಯೇ ದೇಶದ ನಾಲ್ಕು ದಿಕ್ಕುಗಳಲ್ಲಿ ಭ್ರಷ್ಟಾಚಾರದ ವಿರುದ್ಧದ ಘೋಷ ವಾಕ್ಯ ಹೊತ್ತ ಸ್ಕೈ ಬಲೂನ್ ಅಳವಡಿಸಿದೆ, ದಕ್ಷಿಣದ ಕನ್ಯಾಕುಮಾರಿಯಲ್ಲಿ ಭ್ರಷ್ಟಾಚಾರದ ವಿರುದ್ಧದ ಘೋಷ ವಾಕ್ಯ ಹೊತ್ತ ಸ್ಕೈ ಬಲೂನ್‌ನ್ನು ಪವರ್ ಗ್ರಿಡ್ ಸಂಸ್ಥೆ ಅಳವಡಿಸಿದೆ. ಭ್ರಷ್ಟಾಚಾರದ ನಿರ್ಮೂಲನಾ ಜಾಗೃತಿ ಕೇವಲ ಕೆಲವರ ಜವಾಬ್ದಾರಿ ಅಲ್ಲ, ಅದು ಸಮಸ್ತರ ಜವಾಬ್ದಾರಿ. ಭ್ರಷ್ಟಾಚಾರ ನಿರ್ಮೂಲತೆಯ ವಿರುದ್ಧ ದೇಶದಲ್ಲಿ ಐಕ್ಯತೆ ಮೂಡಬೇಕು, ತನ್ಮೂಲಕ ದೇಶ ಸಮಗ್ರತೆಯತ್ತ ಸಾಗಬೇಕು ಹಾಗಾದಾಗ ದೇಶದ ಪ್ರಗತಿಗೆ ಇಂಬು ನೀಡಿದಂತಾ ಗುತ್ತದೆ ಎಂದರು.
‘ಜಾಗೃತಿ ಅರಿವು ಸಪ್ತಾಹ’ದ ಅಂಗವಾಗಿ ಆಯೋಜಿಸಿದ್ದ ಭ್ರಷ್ಟಾಚಾರದ ವಿರುದ್ಧದ ಜನಜಾಗೃತಿ ಜಾಥಾ ಪವರ್ ಗ್ರಿಡ್ ಕಚೇರಿ ಬಳಿಯಿಂದ ಸಿಂಗನಾಯಕನಹಳ್ಳಿ ವೃತ್ತದವರೆಗೆ ಸಾಗಿತು. ಜಾಥಾದಲ್ಲಿ ಪವರ್ ಗ್ರಿಡ್ ಸಂಸ್ಥೆಯ ದಕ್ಷಿಣ ಪ್ರಾಂತ್ಯ-2ರ ನೂರಾರು ಸಿಬ್ಬಂದಿಗಳು ಪಾಲ್ಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು.
