




ಅಭಯ ಮಹಾಗಣಪತಿ ದೇವಾಲಯದ 13ನೇ ವಾರ್ಷಿಕೋತ್ಸವದ ನಿಮಿತ್ತ ಪರಿಷೆ :
ಯಲಹಂಕ : ಯಲಹಂಕದ ವೆಂಕಟಾಲದ ಶ್ರೀ ಅಭಯ ಮಹಾಗಣಪತಿ ದೇವಾಲಯದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ನ.8ರ ಶನಿವಾರದಿಂದ ಎರಡು ದಿನಗಳ ಕಾಲ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದ್ದು, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ಕೆಂಪೇಗೌಡ ವಾರ್ಡ್-1ರ ಮಾಜಿ ಬಿಬಿಎಂಪಿ ಸದಸ್ಯರಾದ ಚಂದ್ರಮ್ಮ ಕೆಂಪೇಗೌಡ ಅವರು ಶನಿವಾರ ಬೆಳಿಗ್ಗೆ 8 ಗಂಟೆಗೆ ಪರಿಷೆಗೆ ಚಾಲನೆ ನೀಡಲಿದ್ದಾರೆ ಎಂದು ಪರಿಷೆಯ ಆಯೋಜಕರು, ಶ್ರೀ ಅಭಯ ಮಹಾಗಣಪತಿ ದೇವಾಲಯದ ಧರ್ಮದರ್ಶಿ ವೆಂಕಟಾಲ ಕೆಂಪೇಗೌಡ ತಿಳಿಸಿದ್ದಾರೆ.
ವಿಶ್ವ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ಮಾದರಿಯಲ್ಲೇ ಕಳೆದ 12 ವರ್ಷಗಳಿಂದ ನಡೆಯುತ್ತಿರುವ ವೆಂಕಟಾಲದ ಈ ಕಡಲೇಕಾಯಿ ಪರಿಷೆಗೆ ಚಿಂತಾಮಣಿ, ಬಾಗೇಪಲ್ಲಿ, ದೊಡ್ಡಬಳ್ಳಾಪುರ, ಹೊಸಕೋಟೆ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಪಾವಗಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಡಲೇಕಾಯಿ ಬೆಳೆಯುವ ರೈತರು ತಾವು ಬೆಳೆದ ವಿವಿಧ ತಳಿಗಳ ಕಡಲೇಕಾಯಿಗಳನ್ನು ತಂದು ಪರಿಷೆಯಲ್ಲಿ ನೇರವಾಗಿ ಮಾರಾಟ ಮಾಡಲಿದ್ದಾರೆ.
ರೈತರು ಮತ್ತು ಸಾರ್ವಜನಿಕರ ಒತ್ತಾಸೆಯ ಮೇರೆಗೆ ಈ ಬಾರಿಯ ಪರಿಷೆಯನ್ನು ಹೆಚ್ಚು ಮುಕ್ತವಾಗಿ ಮತ್ತು ವಿಜೃಂಭಣೆಯಿಂದ ಆಯೋಜಿಸಲು ನಿರ್ಧರಿಸಿದ್ದು, ಪರಿಷೆಯಲ್ಲಿ ಪಾಲ್ಗೊಂಡು, ಕಡಲೇಕಾಯಿ ರಾಶಿ ಹಾಕಿ ವ್ಯಾಪಾರ ಮಾಡುವ ಪ್ರತಿಯೊಬ್ಬ ರೈತರಿಗೆ ಅಭಯ ಮಹಾಗಣಪತಿ ದೇವಾಲಯದ ವತಿಯಿಂದ 500 ರು.ಗಳ ಪ್ರೋತ್ಸಾಹ ಧನದ ಜೊತೆಗೆ ಉಳಿದುಕೊಳ್ಳಲು ಜಾಗ, ಊಟ, ಉಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ.
ಪರಿಷೆಯಲ್ಲಿ ಕಡಲೇಕಾಯಿ ಮಾರಾಟದ ಜೊತೆಗೆ ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಕೃತಕ ಆಭರಣಗಳು, ಮಕ್ಕಳ ಆಟಿಕೆಗಳು, ಮಣ್ಣಿನಿಂದ ತಯಾರಿಸಿದ ಮಡಿಕೆ, ಕುಡಿಕೆಗಳು, ವಿವಿಧ ರೀತಿಯ ತಿಂಡಿ,ತಿನಿಸುಗಳ ಮಾರಾಟವೂ ಸಹ ನಡೆಯಲಿದೆ. ಮಕ್ಕಳು ಮತ್ತು ಪೋಷಕರ ಮನರಂಜನೆಗಾಗಿ ಜಾಯಿಂಟ್ ವ್ಹೀಲ್, ಡ್ಯಾಶಿಂಗ್ ಕಾರ್, ಪುಟಾಣಿ ರೈಲು ಮತ್ತಿತರ ಆಟದ ಸಾಮಗ್ರಿಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಅಭಯ ಮಹಾಗಣಪತಿಗೆ ಸಹಸ್ರ ಮೋದಕ ಹೋಮ, ಆದಿತ್ಯಾದಿ ನವಗ್ರಹ ಹೋಮ, ಗ್ರಾಮ ದೇವತಾ ಹೋಮ, ಮಂಗಳದ್ರವ್ಯ ಸಮೇತ ಕುಂಭಾಭಿಷೇಕ, ರಜತ ಅಲಂಕಾರ, ವಿಷೇಶ ಪೂಜೆ, ದೀಪೋತ್ಸವ, ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಪರಿಷೆಯಲ್ಲಿ ಭಾಗವಹಿಸಲು ಇಚ್ಛಿಸುವ ರೈತರು 9980196440/ 9632365956 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿ ಕೊಳ್ಳಬಹುದು ಎಂದು ಕೋರಿದ್ದಾರೆ.
