ಭಾರತೀಯ ನಾಟ್ಯ  ಪರಂಪರೆಗೆ ಪ್ರಾಚೀನವಾದ ಹಿನ್ನೆಲೆಯಿದೆ : ಎಸ್ ಆರ್ ವಿಶ್ವನಾಥ್
ನೃತ್ಯಾರ್ಕ ಫೌಂಡೇಶನ್ ವತಿಯಿಂದ  ಕಲಾದೀಕ್ಷೆ ಕಾರ್ಯಕ್ರಮ :
ಯಲಹಂಕ : ಇತ್ತೀಚಿನ ದಿನಗಳಲ್ಲಿ ನಮ್ಮ ಯುವಕ, ಯುವತಿಯರು ಪಾಶ್ಚಿಮಾತ್ಯ ಸಂಸ್ಕೃತಿ, ನೃತ್ಯ, ಕಲೆಗಳಿಗೆ ಮಾರು ಹೋಗುತ್ತಿರುವುದು ಬೇಸರದ ಸಂಗತಿ, ಭಾರತೀಯ ನೃತ್ಯ, ಸಂಗೀತ ಕಲೆಗೆ ಸಹಸ್ರಾರು ವರ್ಷಗಳಷ್ಟು ಪುರಾತನ ಇತಿಹಾಸ ವಿದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.
ನೃತ್ಯಾರ್ಕ ಫೌಂಡೇಶನ್ ವತಿಯಿಂದ ಯಲಹಂಕದ ಅಂಬೇಡ್ಕರ್ ಭವನ ದಲ್ಲಿ ಶನಿವಾರ ಆಯೋಜಿಸಿದ್ದ ಕಲಾ ದೀಕ್ಷೆ(ವಾರ್ಷಿಕೋತ್ಸವ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಭಾರತ ನಾಟ್ಯಕಲೆಯ ತವರೂರು, ನಮ್ಮ ಭರತನಾಟ್ಯ ಕಲೆಗೆ ಸಹಸ್ರಾರು ವರ್ಷಗಳ ಪುರಾತನವಾದ ಪರಂಪರೆಯಿದೆ. ನಮ್ಮ ನಾಟ್ಯಕಲೆಗೆ ಅದರದ್ದೇ ಆದ ಶಿಸ್ತು,ನಿಯಮಗಳಿವೆ. ಭರತಮುನಿ  ನಾಟ್ಯಕಲೆಯ ಆದಿಗುರು, ಭರತನಾಟ್ಯ ಎಂಬ ಅಭಿದಾನ ದಿಂದಲೇ ನಮ್ಮ ನಾಟ್ಯ ಕಲೆ ವಿಶ್ವದಾದ್ಯಂತ ವಿಜೃಂಭಿಸುತ್ತಿದೆ. ಇಂತಹ ಶ್ರೀಮಂತ  ನೃತ್ಯ ಕಲೆಯ ಬಗ್ಗೆ ನಮ್ಮ ಯುವಕ, ಯುವತಿ ಯರು ಜ್ಞಾನಶೂನ್ಯರು, ಅಭಿಮಾನ ಶೂನ್ಯರಾಗಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಖ್ಯಾತ ನೃತ್ಯ ಕಲಾವಿದೆ, ಕರ್ನಾಟಕ ಕಲಾಶ್ರೀ ಡಾ.ಶೀಲಾ ಶ್ರೀಧರ್ ಮಾತನಾಡಿ ‘ಸಂಗೀತ, ನೃತ್ಯ ಕಲೆಗಳ ಬಗ್ಗೆ ಆಸಕ್ತಿಯಿಲ್ಲದವರು ಪಶುಗಳಿಗೆ ಸಮಾನ ಎಂಬ ಮಾತಿದೆ. ಜಗತ್ತಿನಲ್ಲಿ ನೃತ್ಯ, ಸಂಗೀತವನ್ನು ಆಸ್ವಾದಿಸದ, ಅನುಭವಿಸದ ಹೃದಯಗಳಿಲ್ಲ. ವ್ಯಕ್ತಿಯೊಬ್ಬ ಸಂಗೀತ ಕೇಳುತ್ತಾನೆ, ನೃತ್ಯವನ್ನು ನೋಡುತ್ತಾನೆಂದರೆ ಅವನಲ್ಲಿ ಕಲಾಸಕ್ತಿ ಮತ್ತು ಕಲೆ ಇವೆ ಎಂದೇ ಅರ್ಥೈಸಿಕೊಳ್ಳಬೇಕು ಎಂದರು.
ಕಲಾ ದೀಕ್ಷೆ ಶೀರ್ಷಿಕೆಯಲ್ಲಿ ನಡೆದ ಈ ನೃತ್ಯಸಂಜೆ ಕಾರ್ಯಕ್ರಮದಲ್ಲಿ ಬೆಂಗಳೂರು ಮತ್ತು ಮೈಸೂರು ನಗರಗಳ ಹಲವು ನಾಟ್ಯ ಪಟುಗಳು ಭರತನಾಟ್ಯ ಪ್ರದರ್ಶನ ಮಾಡಿ ತಮ್ಮ ಪ್ರತಿಭೆ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ದಶಾವತಾರ ನೃತ್ಯ ರೂಪಕ ನೆರೆದಿದ್ದ ಪ್ರೇಕ್ಷಕರನ್ನು ಕ್ಷಣಕಾಲ ಮೂಕ ವಿಸ್ಮಿತರನ್ನಾಗಿಸಿತು.
ಕಲಾ ದೀಕ್ಷೆಯ ಮಹತ್ವದ ಈ ಕಾರ್ಯಕ್ರಮದಲ್ಲಿ ವಿಧುಷಿ ರೇವತಿ  ಕಾಮತ್, ನೃತ್ಯಾರ್ಕ ಫೌಂಡೇಶನ್ ನ ಅಧ್ಯಕ್ಷೆ ವಿಧುಷಿ ಭೂಮಿಕಾ ರವೀಂದ್ರ, ಉಪಾಧ್ಯಕ್ಷ ರವೀಂದ್ರ, ವ್ಯವಸ್ಥಾಪಕ ಟ್ರಸ್ಟಿ‌ ಶೋಭಾ ರಾಮಕೃಷ್ಣ, ಭರತನಾಟ್ಯ ಕಲಾವಿದೆ ಅಂಜಲಿ ಶೆಟ್ಟಿ, ಆದಿತ್ಯ ಆಟೋ ಸಂಸ್ಥೆಯ ಮುಖ್ಯಸ್ಥರಾದ ಸಿ.ಜಯರಾಮನ್, ಉಮಾಜಯರಾಮನ್, ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್ ನ ಅಧ್ಯಕ್ಷ ಎಲ್.ಕಾಳಪ್ಪ, ಯಲಹಂಕ ನಗರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಬೃಂದಾ ವೀರೇಶ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *