





ಧಾರ್ಮಿಕ ಉತ್ಸವಗಳು ದೈವಭಕ್ತಿಯ ಜೊತೆಗೆ ಧಾರ್ಮಿಕ ಒಗ್ಗಟ್ಟು ಮೂಡಿಸುತ್ತವೆ : ಎಸ್ ಆರ್ ವಿಶ್ವನಾಥ್
ಸಿಂಗನಾಯಕನಹಳ್ಳಿಯ ಶ್ರೀ ವೀರಾಂಜನೇಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯ ಹನುಮ ಜಯಂತಿ :
ಯಲಹಂಕ : ಧಾರ್ಮಿಕ ಉತ್ಸವ, ಜಾತ್ರೆ, ಪರಿಷೆಗಳು ದೈವಭಕ್ತಿಯ ಜೊತೆಗೆ ಧಾರ್ಮಿಕ ಒಗ್ಗಟ್ಟು ಮೂಡಿಸುತ್ತವೆ ಎಂದು ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.
ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ವೀರಾಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ‘ಶ್ರೀರಾಮಚಂದ್ರನ ಪರಮಭಕ್ತ ಹನುಮನ ಜಯಂತಿಯನ್ನು ಸಿಂಗನಾಯಕನಹಳ್ಳಿ ಗ್ರಾಮಸ್ಥರ ಸಹಯೋಗದೊಂದಿಗೆ ಇಂದು ಅತ್ಯಂತ ಶ್ರದ್ಧೆ, ವಿಜೃಂಭಣೆಯಿಂದ ಅಚರಿಸುತ್ತಿರುವುದು ಸಂತೋಷದ ಸಂಗತಿ. ದೇವರ ಉತ್ಸವ, ಜಾತ್ರೆ, ಪರಿಷೆಯಂತಹ ಕಾರ್ಯಕ್ರಮಗಳು ದೈವಭಕ್ತಿಯ ಜೊತೆಗೆ ಧಾರ್ಮಿಕ ಒಗ್ಗಟ್ಟು, ಧರ್ಮ ಜಾಗೃತಿ ಮೂಡಿಸುತ್ತವೆ ಎಂದರು.
ಹನುಮ ಜಯಂತಿ ಪ್ರಯುಕ್ತ ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ವೀರಾಂಜನೇಯಸ್ವಾಮಿಗೆ ಪಂಚಾಮೃತಾಭಿಷೇಕ, ಬೆಳ್ಳಿ ಕವಚ ಅಲಂಕಾರ ನೆರವೇರಿಸಲಾಯಿತು. ಬೆಳಿಗ್ಗೆ 11ಗಂಟೆಗೆ ವಿಶೇಷ ಪೂಜೆ, ಮಹಾಮಂಗಳಾರತಿ, ಮೆರವಣಿಗೆ, ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಮುಂತಾದ ದೈವ ಸೇವಾ ಕಾರ್ಯಗಳನ್ನು ನೆರವೇರಿಸಲಾಯಿತು.
ಹನುಮ ಜಯಂತಿಯ ಈ ವಿಶೇಷ ಕಾರ್ಯಕ್ರಮದಲ್ಲಿ ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್, ಬಿಜೆಪಿ ಯುವ ಮುಖಂಡರು, ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕ ಅಲೋಕ್ ವಿಶ್ವನಾಥ್, ಹಿರಿಯ ಬಿಜೆಪಿ ಮುಖಂಡ ಎಸ್.ಎನ್.ರಾಜಣ್ಣ, ಸಿಂಗನಾಯಕನಹಳ್ಳಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎಸ್.ಜಿ.ಪ್ರಶಾಂತ್ ರೆಡ್ಡಿ, ಗ್ರಾ.ಪಂ.ಸದಸ್ಯರಾದ ಪದ್ಮಶ್ರೀ ನಾಗರಾಜ್ ರೆಡ್ಡಿ, ಶಾಂತಲಾ ರಾಜಣ್ಣ, ಕೆ.ಬಾಬು, ಮಲ್ಲೇಶ್, ಬಿಜೆಪಿ ಮುಖಂಡರಾದ ಶಿವಾನಂದ್, ಸತೀಶ್ ರೆಡ್ಡಿ, ನಾಗರಾಜ್, ಮುನಿಕೃಷ್ಣ ಸೇರಿದಂತೆ ಇನ್ನಿತರರಿದ್ದರು.
