7.25 ಕೋಟಿ ರು.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ವಿಶ್ವನಾಥ್ ಚಾಲನೆ :
ಯಲಹಂಕ : ಕ್ಷೇತ್ರದ ವಡೇರಹಳ್ಳಿ ಗ್ರಾ.ಪಂ.ವ್ಯಾಪ್ತಿಯ ವೀರಸಾಗರ ಗ್ರಾಮದಲ್ಲಿ 6 ಕೋಟಿ ರು.ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮತ್ತು ಶ್ಯಾಮರಾಜಪುರ ಗ್ರಾಮದಲ್ಲಿ 1.25 ಕೋಟಿ ರು.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ 7.25.ಕೋಟಿ ರು.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಶುಕ್ರವಾರ ಚಾಲನೆ ನೀಡಿದರು. 
ನಂತರ ಅವರು ಮಾತನಾಡಿ ‘ಕ್ಷೇತ್ರದಲ್ಲಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ‌ ಮಹತ್ವ ನೀಡಿದ್ದು, ಕೆರೆಗಳ ಸ್ವಚ್ಛತೆ, ಊಳೆತ್ತುವುದು, ಕೆರೆಗಳ ಸುತ್ತ ವ್ಯವಸ್ಥಿತ ವಾಕಿಂಗ್ ಟ್ರ್ಯಾಕ್, ತೆರೆದ ವ್ಯಾಯಾಮ ಶಾಲೆ, ಧ್ಯಾನ ಕೇಂದ್ರ, ಮಕ್ಕಳಿಗಾಗಿ ಆಟಿಕೆಗಳ ಅಳವಡಿಕೆ, ಕೆರೆ ಸುತ್ತ  ಹಸಿರು ಪರಿಸರ ನಿರ್ಮಾಣ, ಶೌಚಾಲಯ ನಿರ್ಮಾಣ ಸೇರಿದಂತೆ ಕೆರೆಗಳ ಸರ್ವಾಂಗೀಣ ಅಭಿವೃದ್ಧಿಗೆ ಬಹುವಾಗಿ ಶ್ರಮಿಸಿರುವ ಹಿನ್ನೆಲೆಯಲ್ಲಿ ಯಲಹಂಕ ಕ್ಷೇತ್ರದಲ್ಲಿನ ಕೆರೆಗಳು ನೋಡುಗರಿಗೆ  ದೃಶ್ಯ ಮನೋಹರವಾಗಿವೆ. ಕೆರೆಗಳು ನಮ್ಮ ಜೀವನಾಡಿಗಳಾಗಿದ್ದು ಅವುಗಳ ಸಂರಕ್ಷಣೆ, ಅಭಿವೃದ್ಧಿ ನಮ್ಮ ಆಧ್ಯತೆಯಾಗಬೇಕು. ಇಂದು 6 ಕೋಟಿ ರು.ವೆಚ್ಚದಲ್ಲಿ ವೀರಸಾಗರ ಕೆರೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದ್ದು, ಕೆರೆಯ ಸಂಪೂರ್ಣ ನೀರನ್ನು ಹೊರಹಾಕಿ ಊಳೆತ್ತಿಸಿ ನಂತರ ನೀರು ತುಂಬಿಸಲಾಗು ವುದು‌. ಇತರ ಕೆರೆಗಳ ಅಭಿವೃದ್ಧಿಯಂತೆಯೇ ವೀರಸಾಗರ ಕೆರೆ ಆವರಣದಲ್ಲಿಯೂ ಸಹ
ವ್ಯವಸ್ಥಿತ ವಾಕಿಂಗ್ ಟ್ರ್ಯಾಕ್, ತೆರೆದ ವ್ಯಾಯಾಮ ಶಾಲೆ, ಮಕ್ಕಳಿಗಾಗಿ ಆಟಿಕೆಗಳ ಅಳವಡಿಕೆ, ಕೆರೆ ಸುತ್ತ  ಹಸಿರು ಪರಿಸರ ನಿರ್ಮಾಣ, ಶೌಚಾಲಯ ನಿರ್ಮಾಣದಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಈ ಭಾಗದಲ್ಲಿ ವಾಕಿಂಗ್ ಪ್ರಿಯರಿಗೆ ಅಗತ್ಯವಿರುವ ಪಾರ್ಕ್ ಗಳಾಗಲಿ, ಮೈದಾನಗಳಾಗಲಿ ಇಲ್ಲದಿರುವುದನ್ನು ಮನಗಂಡು ವೀರಸಾಗರ ಕೆರೆಯ ಆವರಣದಲ್ಲಿ ವಾಕಿಂಗ್ ಟ್ರ್ಯಾಕ್ ಸೇರಿದಂತೆ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ, ನಡಿಗೆದಾರರಿಗೆ, ಮಕ್ಕಳಿಗೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಇಂದು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹಾಗೆಯೇ 1.25 ಕೋಟಿ ರು.ವೆಚ್ಚದಲ್ಲಿ ಶ್ಯಾಮರಾಜಪುರ-ಸುಬೇದಾರ್ ಪಾಳ್ಯ ಮುಖ್ಯ ರಸ್ತೆಯ ಮರುಡಾಂಬರೀಕರಣ ಕಾಮಗಾರಿಗೂ ಸಹ ಚಾಲನೆ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಡೇರಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಸರೋಜಮ್ಮ, ಉಪಾಧ್ಯಕ್ಷ ರಾಕೇಶ್, ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ವಿ.ಪವನ್ ಕುಮಾರ್, ಸದಾಶಿವ, ಎ.ಸಿ.ಮುನಿಕೃಷ್ಣಪ್ಪ, ಬಿಜೆಪಿ ಎಸ್.ಸಿ. ಮೋರ್ಚಾ ಪದಾಧಿಕಾರಿಗಳಾದ ಶ್ರೀನಿವಾಸಯ್ಯ, ಮುನಿರಾಜು, ನಾಗೇಶ್ ವಿ.ಎ., ಕೆ.ಎಂ.ಮುರಳಿ, ಅಟ್ಟೂರು ವಿಶ್ವ, ಸುನಿಲ್ ಕುಮಾರ್, ಗ್ರಾ‌.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ್, ರಮೇಶ್, ಕೃಷ್ಣಮೂರ್ತಿ, ಪಟಾಲಪ್ಪ, ಗೋಪಾಲಪ್ಪ, ಲೋಕೇಶ್, ಆನಂದ್, ಹರೀಶ್, ಭದ್ರಾಚಲ, ನಿರಂಜನ್, ಶ್ರೀಧರ್, ವಿನೋದ್ ಕುಮಾರ್, ನಾಗೇಂದ್ರಕುಮಾರ್, ಸೇರಿದಂತೆ ಗ್ರಾ.ಪಂ.ಸದಸ್ಯರು ಹಾಗೂ ಬಿಜೆಪಿ ಮುಖಂಡರಿದ್ದರು.
ಬಾಕ್ಸ್ :
ಅಕ್ರಮ ಮನೆಗಳಿಗೆ  ಸೌಲಭ್ಯ ನೀಡಿರುವ ಕಂದಾಯ, ಬಿಬಿಎಂಪಿ ಅಧಿಕಾರಿಗಳ ಮೇಲೆ ಮೊದಲು ಕ್ರಮಕೈಗೊಳ್ಳಬೇಕು :
ಕೋಗಿಲು ಬಡಾವಣೆ ಸಮೀಪದ ಫಕೀರ್ ಲೇಔಟ್ ನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದವರಿಗೆ ಅಕ್ರಮ ಎಂದು ತಿಳಿದಿದ್ದರೂ ವಿದ್ಯುತ್ ಸೌಲಭ್ಯ ಸೇರಿದಂತೆ ಮೂಲಸೌಕರ್ಯವನ್ನು ನೀಡಿರುವ ಕಂದಾಯ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮೊದಲು ಕ್ರಮ ಜರುಗಿಸಬೇಕಿದೆ, ಏಕೆಂದರೆ ಅಕ್ರಮ ಎಂದು ತಿಳಿದಿದ್ದರೂ ಸಹ ಯಾವ ಮಾನದಂಡದ ಮೇಲೆ ಮೂಲ ಸೌಕರ್ಯ ನೀಡಿದ್ದಾರೆ ಎಂಬುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಫಕೀರ್ ಲೇಔಟ್ ನಲ್ಲಿ ವಾಸಿಸುತ್ತುರುವವರು ಎಲ್ಲರೂ ಅಕ್ರನ ವಾಸಿಗಳೇ ಆಗಿದ್ದು, ಬಾಂಗ್ಲಾ ವಲಸಿಗರು, ನೆರೆಯ ತಮಿಳು ನಾಡು, ಆಂಧ್ರ ಪ್ರದೇಶ ಮತ್ತು ಉತ್ತರ ಭಾರತೀಯರಿಗೆ ಸ್ಥಳೀಯ ಭೂ ಮಾಫಿಯಾಗಳು ಹಣ ಪಡೆದು ಮನೆ ನಿರ್ಮಿಸಿಕೊಟ್ಟಿದ್ದಾರೆ. ಈ ಕುರಿತು ಬಿಜೆಪಿ ಪಕ್ಷದಿಂದ ಸತ್ಯಶೋಧನಾ ಸಮಿತಿ ರಚಿಸಿ, ಗುರುವಾರ ಸತ್ಯಶೋಧನಾ ಸಮಿತಿ ಸಭೆ ಕರೆದು  ಈ ಕುರುತು ಚರ್ಚೆ ನಡೆಸಿದ್ದು, ಅಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರ ಹಿನ್ನೆಲೆ ಏನು, ಯಾವ ಆಧಾರದ ಮೇಲೆ ಫಕೀರ್ ಲೇಔಟ್ ನಲ್ಲಿ ನೆಲೆಸಿದ್ದಾರೆ ಎಂಬುದರ ವಾಸ್ತವ ಸ್ಥಿತಿ ಕುರಿತು ಮಾಹಿತಿ ಕಲೆ ಹಾಕುತ್ತಿದ್ದು, ವಾಸ್ತವಾಂಶದ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಲಾಗುವುದು. ಈ ನಿಟ್ಟಿನಲ್ಲಿ ಇನ್ನೆರಡು ದಿನಗಳಲ್ಲಿ ಸದರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು.
ಕೇರಳ ಮುಖ್ಯಮಂತ್ರಿಯ ಟೀಕೆಗೆ ಮಣಿದು, ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ನಿವಾಸಿಗಳಿಗೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಪರ್ಯಾಯ ಮನೆ ನೀಡುವ ಸರ್ಕಾರದ ಕ್ರಮ ಸರಿಯಾದ ನಡೆಯಲ್ಲ. ಕಳೆದ ಆರು ವರ್ಷಗಳಿಂದ ರಾಜೀವ್ ಗಾಂಧಿ ವಸತಿ ಯೋಜನೆಯ ಮನೆಗಳಿಗಾಗಿ  ಹಣ ನೀಡಿ ಅರ್ಜಿ ಹಾಕಿಕೊಂಡಿರುವ ನೈಜ ಫಲಾನುಭವಿಗಳಿಗೆ ಮನೆ ನೀಡುವುದನ್ನು ಬಿಟ್ಟು, ನಿನ್ನೆ ಮೊನ್ನೆಯ ಅಕ್ರಮ ನಿವಾಸಿಗಳಿಗೆ ಸರ್ಕಾರ ಮನೆ ನೀಡುವುದಾದರೆ ಸರ್ಕಾರ ರಾಜ್ಯದ ಜನತೆಗೆ ಏನು ಸಂದೇಶ ನೀಡಿದಂತಾಗುತ್ತದೆ ಎಂಬುದನ್ನು ಆತ್ಮಾವಲೋಕನ‌‌ ಮಾಡಿಕೊಳ್ಳಬೇಕು. ಸರ್ಕಾರ ಅಕ್ರಮ ಮನೆಗಳನ್ನು ತೆರವುಗೊಳಿಸಿ ಜಾಗ ವಶಪಡಿಸಿಕೊಂಡಿರುವ ನಡೆಯನ್ನು ಸ್ವಾಗತಿಸುತ್ತೇವೆ ಆದರೆ ಅಲ್ಲಿನ ಅಕ್ರಮಿಗರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯ ಮನೆಗಳನ್ನು ಪರ್ಯಾಯವಾಗಿ ನೀಡಲು ಮುಂದಾಗಿರುವ ಸರ್ಕಾರದ ನಡೆಯ ವಿರುದ್ಧ ನಾವು ಹೋರಾಟ ಮಾಡಲಿದ್ದೇವೆ.
ಸರ್ಕಾರ ಅಕ್ರಮ ನಿವಾಸಿಗಳಿಗೆ ಪರ್ಯಾಯ ಮನೆ ನೀಡುವುದಾದರೆ ಮುಂದಿನ ದಿನಗಳಲ್ಲಿ ಅಕ್ರಮಿಗರು ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿ ಪರ್ಯಾಯ ಮನೆ ಪಡೆಯುವ ಬಹುದೊಡ್ಡ ಅಕ್ರಮಕ್ಕೆ ಮುಂದಾಗುವ ಅಪಾಯವಿದೆ. ಸರ್ಕಾರ ಈ ಕುರಿತು ಕೇರಳ ಸರ್ಕಾರದ ಅಥವಾ ಜನಪ್ರತಿನಿಧಿಗಳ ಟೀಕೆಗೆ ಮಣಿಯದೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಇಲ್ಲದಿದ್ದರೆ ಸರ್ಕಾರಿ ಜಾಗಗಳನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ ಎಂದರು.

Leave a Reply

Your email address will not be published. Required fields are marked *