

ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ರಾಹುಲ್ ರಿಂದ ಆಯೋಜನೆ :
ಬ್ಯಾಟರಾಯನಪುರ : 2026ರ ಹೊಸ ವರ್ಷದ ಪ್ರಯುಕ್ತ ಬ್ಯಾಟರಾಯನಪುರ ಕ್ಷೇತ್ರದ ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ(ಪುಟ್ಟು) ಅವರ ಮಾರ್ಗದರ್ಶನದಲ್ಲಿ ಯುವ ಮುಖಂಡ, ಗ್ರಾ.ಪಂ.ಮಾಜಿ ಅಧ್ಯಕ್ಷ ಪಿ.ರಾಹುಲ್ ಮತ್ತು ಅವರ ಕುಟುಂಬದ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಸ್ನೇಹಿತರ ಭೋಜನ ಕೂಟ’ದಲ್ಲಿ ಮಾರೇನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಸುತ್ತಮುತ್ತಲಿನ ವಿವಿಧ ಗ್ರಾಮಗಳ ಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿ.ರಾಹುಲ್ ಅವರ ಹಿತೈಷಿಗಳು, ಸ್ನೇಹಿತರು, ಹಿರಿಯ ಮಾರ್ಗದರ್ಶಕರು ಸೇರಿದಂತೆ ಸಹಸ್ರಾರು ಮಂದಿ ತಮ್ಮಿಷ್ಟದ ಸಸ್ಯಾಹಾರಿ, ಮಾಂಸಾಹಾರಿ ಭೋಜನ ಸವಿದು ಸಂತೃಪ್ತ ಭಾವದಿಂದ ಹೊಸ ವರ್ಷದ ಶುಭ ಹಾರೈಸಿದರು.
ಈ ವೇಳೆ ಗ್ರಾ.ಪಂ.ಮಾಜಿ ಅಧ್ಯಕ್ಷ, ಯುವ ಮುಖಂಡ ರಾಹುಲ್ ಮಾತನಾಡಿ ‘ಹೊಸ ವರ್ಷದ ನೆಪದಲ್ಲಿ ಸ್ನೇಹಿತರು, ಮುಖಂಡರು, ಹಿತೈಷಿಗಳೆಲ್ಲರು ಒಂದೆಡೆ ಕಲೆತು ಸಹಪಂಕ್ತಿ ಭೋಜನ ಮಾಡುವ ಮೂಲಕ ಸಂತೋಷ ವಿನಿಮಯ ಮಾಡಿಕೊಳ್ಳಬೇಕು ಎಂಬುದಷ್ಟೇ ಈ ಸ್ನೇಹಿತರ ಭೋಜನಕೂಟದ ಉದ್ದೇಶ. ಹೊಸ ವರ್ಷ ಎಲ್ಲರ ಬಾಳಲ್ಲಿ ಹೊಸ ಹರ್ಷ ತರುವಂತಾಗಲಿ, ಹೊಸ ವರ್ಷದ ಅಂಗವಾಗಿ ಓಂ ಶಕ್ತಿಗೆ ಮಾಲೆ ಹಾಕಿಕೊಂಡು ವೃತಾಚರಣೆ ಪಾಲಿಸಿದ್ದ ಮಾಲಾಧಾರಿ ಮಾತೆಯರನ್ನು ಇತ್ತೀಚೆಗಷ್ಟೆ ಮೇಲ್ ಮರವತ್ತೂರು ಓಂ ಶಕ್ತಿ ದೇವಾಲಯಕ್ಕೆ ಉಚಿತ ಬಸ್ ವ್ಯವಸ್ಥೆಯ ಮೂಲಕ ಕಳಿಸಿಕೊಡಲಾಗಿದೆ. ಕೆಲವೇ ದಿನಗಳಲ್ಲಿ ಅಯ್ಯಪ್ಪಸ್ವಾಮಿಗೆ ಮಲೆ ಹಾಕಿಕೊಂಡು ವೃತಾಚಾರಣೆ ಮಾಡುತ್ತಿರುವ ಮಾಲಾಧಾರಿ ಭಕ್ತರನ್ನು ಶಬರಿ ಮಲೆಗೆ ಉಚಿತ ಬಸ್ ಸೌಲಭ್ಯದಲ್ಲಿ ಕಳಿಸಿಕೊಡಲು ಸರ್ವ ಸಿದ್ಧತೆ ಮಾಡಲಾಗಿದೆ. ಕಂದಾಯ ಸಚಿವರು, ನಮ್ಮ ನೆಚ್ಚಿನ ನಾಯಕರಾದ ಕೃಷ್ಣಬೈರೇಗೌಡ ಅವರ ಸಹಕಾರದಿಂದಾಗಿ ಮಾರೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು. ಅವರ ಸಲಹೆ, ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಲು ನನಗೊಂದು ಸುವರ್ಣಾವಕಾಶ ನೀಡಿದ್ದ ಸಚಿವ ಕೃಷ್ಣಬೈರೇಗೌಡ ಅವರಿಗೆ ಸದಾ ಚಿರ ಋಣಿಯಾಗಿರುತ್ತನೆ, ಮುಂದೆಯೂ ಸಹ ಅವರ ಸಲಹೆ ಮಾರ್ಗದರ್ಶನದಲ್ಲಿ ರಾಜಕೀಯ ಜೀವನದಲ್ಲಿ ಮುನ್ನಡೆಯಲು ಇಚ್ಛಿಸುತ್ತೇನೆ, ಹೊಸ ವರ್ಷ ಎಲ್ಲರ ಬದುಕಲ್ಲಿ ಸುಖ, ಸಂತೋಷದ ಬೆಳಕು ನೀಡಲಿ, ಅವರ ಗುರಿ, ಉದ್ದೇಶಗಳು ಈಡೇರಲಿ ಎಂದು ಹೊಸ ವರ್ಷದ ಶುಭ ಹಾರೈಸಿದರು.
ಸ್ನೇಹ-ಸಮ್ಮಿಲನ ಬೆಸೆಯುವ ದಿಸೆಯಲ್ಲಿ ಏರ್ಪಡಿಸಿದ್ದ ಈ ಭೋಜನ ಕೂಟದಲ್ಲಿ ಮಾರೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮುಖಂಡರು, ಜಾಲ ಹೋಬಳಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮಸ್ಥರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout
Yelahanka Bangalore Karnataka
9845085793. 7349337989
