






ವಿಜೃಂಭಣೆಗೆ ಸಾಕ್ಷಿಯಾದ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘದ 30ನೇ ವಾರ್ಷಿಕೋತ್ಸವ :
ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣ :
ಯಲಹಂಕ : ಯಲಹಂಕ ಉಪನಗರದ ವಿಶ್ವಕರ್ಮ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ ಯಲಹಂಕ’ದ 30ನೇ ವಾರ್ಷಿಕೋತ್ಸವ ಸಮಾರಂಭ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿಜೃಂಭಣೆಯಿಂದ ನಡೆಯಿತು.
ಸಮಾರಂಭದಲ್ಲಿ ಯಲಹಂಕ ಶಾಸಕರಾದ ಎಸ್.ಆರ್. ವಿಶ್ವನಾಥ್, ಹಾಸ್ಯ ಸಾಹಿತಿ ದುಂಡಿರಾಜ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶೇಖರ್ ಶೆಟ್ಟಿ ಯವರು ವಹಿಸಿದ್ದು, ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಕೃಷ್ಣಕುಮಾರ್ ಹೆಗಡೆ, ಪೂರ್ವ ಅಧ್ಯಕ್ಷರಾದ ಪರಿಕ ಭಾಸ್ಕರ್ ಶೆಟ್ಟಿ, ಅಲಂಗಾರು ಬಾಬು ಶೆಟ್ಟಿ, ಉಪಾಧ್ಯಕ್ಷರಾದ ಜಯರಾಮ್ಟ ಶೆಟ್ಟಿ, ಮಹಿಳಾ ಉಪಾಧ್ಯಕ್ಷರಾದ ಲತಾ ಹರೀಶ್ ಶೆಟ್ಟಿ, ಖಜಾಂಚಿ ವಿಶ್ವನಾಥ ಶೆಟ್ಟಿ, ಮಧು, ರವಿ, ಇನ್ನಿತರ ಗಣ್ಯರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಿರುತೆರೆ ಕಲಾವಿದರು, ಚಿತ್ರನಟರಾದ ಗುರು ಹೆಗ್ಡೆ, ಸತೀಶ್ ಆಚಾರ್, ಬಾಸ್ಕೆಟ್ ಬಾಲ್ ಕ್ರೀಡಾಪಟು ಕು.ಲೇಖನಾ ಹೆಗ್ಡೆ ಇವರನ್ನು ವೇದಿಕೆ ಮೇಲೆ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಧಾನಿಗಳನ್ನು ಹಾಗೂ ಸಂಘದ ಬೆಳವಣಿಗೆಗೆ ಶ್ರಮಿಸಿದ ಸಂಘದ 30 ವರ್ಷದ ಕಾರ್ಯಕಾರಿ ಸಮಿತಿಯ ಸದಸ್ಯರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.
ವಾರ್ಷಿಕೋತ್ಸವದ ಅಂಗವಾಗಿ ಸುಬ್ರಾಯ ಹೆಬ್ಬಾರ್ ನಿರ್ದೇಶನದಲ್ಲಿ ಸಂಘದ ಬಾಲ ಕಲಾವಿದರಿಂದ ಶ್ರೀ ಸುದರ್ಶನ ವಿಜಯ ಯಕ್ಷಗಾನ ಪ್ರಸಂಗ, ಸಂಘದ ಪುರುಷ ಮತ್ತು ಮಹಿಳಾ ಕಲಾವಿದರಿಂದ ಶ್ರೀ ವೀರೋಚನ ಕಾಳಗ ಯಕ್ಷಗಾನ ಪ್ರಸಂಗ ಪ್ರದರ್ಶನ ಸಭಿಕರ ಮನಸೂರೆಗೊಂಡವು. ಸಂಘದ ಸದಸ್ಯರು ಹಾಗೂ ಕುಟುಂಬ ಸದಸ್ಯರಿಂದ ಪ್ರದರ್ಶನಗೊಂಡ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಿದವು.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಬಲೆ ತೆಲಿಪಾಲೆ’ ತಂಡದಿಂದ ಪ್ರದರ್ಶನಗೊಂಡ ತುಳು ಹಾಸ್ಯ ಪ್ರಹಸನ ‘ತೆಲಿಕೆದ ಬರ್ಸ’ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲುವಂತೆ ಮಾಡಿತು.
ಕಾರ್ಯಕ್ರಮವನ್ನು ಸಂಘದ ಯುವ ವೇದಿಕೆಯ ಅಮೂಲ್ಯ ಶೆಟ್ಟಿಯವರು ಅತ್ಯಂತ ಅಚ್ಚುಕಟ್ಟಾಗಿ ನಿರೂಪಿಸಿದರು.
ಅಂತ್ಯದಲ್ಲಿ ಸಂಘದ ಕಾರ್ಯದರ್ಶಿ ಅಶೋಕ ಹೆಬ್ಬಾರ್ ಅವರು ವಂದನಾರ್ಪಣೆ ಮಾಡಿದರು.
ಬೆಳಗಿನಿಂದ ಸಂಜೆಯವರೆಗೂ ಸತತವಾಗಿ ನಡೆದ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘದ ವಾರ್ಷಿಕೋತ್ಸವದಲ್ಲಿ ಸಂಘದ ಸದಸ್ಯರು, ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ತೀರದ ಸಹಸ್ರಾರು ಮಂದಿ ಕಾರ್ಯಕ್ರಮಕ್ಕೆ ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರಿಗೂ ಬೆಳಗಿನ ಉಪಹಾರ, ಮದ್ಯಾಹ್ನದ ಭೋಜನ, ಸಂಜೆ ಉಪಹಾರ, ಚಹಾ, ಕಾಫಿ ವ್ಯವಸ್ಥೆ ಕಲ್ಪಿಸಲಾಗಿತ್ತು.
