

ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಯಲಹಂಕ ಸುದ್ದಿ. ದಿನಾಂಕ 21. 02.2026 ರಂದು ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಪದವಿಪೂರ್ವ ಕಾಲೇಜು ಹಾಗೂ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಆತಿಥ್ಯ ಲಿಯೋ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ
ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ನಡೆಯಿತು. ಬೆಳಿಗ್ಗೆ ನಡೆದ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ ವಿ ಎನ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾದ ಡಾ. ಸುಹಾಸ್ ಸುಬ್ಬರಾಜು ಅವರು ಮಾತನಾಡಿ ಸಿಂಧಿ ಪದವಿ ಪೂರ್ವ ಕಾಲೇಜಿನಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿರುವುದು ಶ್ಲಾಘನೀಯ ಕಾರ್ಯ ಎಂದು ಬಣ್ಣಿಸಿ ಕೋವಿಡ್ ನಂತರ ಜನರಲ್ಲಿ ಆರೋಗ್ಯದ ಮಹತ್ವದ ಬಗ್ಗೆ ಅರಿವು ಮೂಡಿದೆ. ಈ ರೀತಿಯ ಶಿಬಿರಗಳು ಆರೋಗ್ಯ ಕಾಪಾಡಿಕೊಳ್ಳಲು ಜನರಿಗೆ ನೆರವು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು. ಹದಿಹರೆಯದವರಲ್ಲಿ ಮೊಬೈಲ್ ಗೀಳು ಹೆಚ್ಚಾಗಿದ್ದು ಅದನ್ನು ಕಡಿಮೆ ಮಾಡಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರಾದ ನಮ್ಮ ಮೇಲಿದೆ ಎಂದು ಅವರು ತಿಳಿಸಿದರು. ಸಿಂಧಿ ಸೇವಾ ಸಮಿತಿ ಹಾಗೂ
ಸಿಂಧಿ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಲಯನ್ ಪ್ರಕಾಶ್ ಎಫ್ ಮಾಧ್ವಾನಿಯವರು ಮಾತನಾಡಿ ನಮ್ಮ ವಿದ್ಯಾಸಂಸ್ಥೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು ವಿದ್ಯಾದಾನವೇ ನಮ್ಮ ಮೊದಲ ಆದ್ಯತೆ ಎಂದು ತಿಳಿಸಿದರಲ್ಲದೆ ಉತ್ತಮ ಶಿಕ್ಷಣದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಆತಿಥ್ಯ ಲಿಯೋ ಕ್ಲಬ್ ವತಿಯಿಂದ ಈ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅವರು 2025-26ನೇ ಸಾಲಿನ ಜೆಇಇ ಸೆಷನ್ 1 ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಮಕ್ಕಳಿಗೆ ಶುಭಾಶಯ ಕೋರಿ ಸಂಸ್ಥೆಯ ವತಿಯಿಂದ ನೆನಪಿನ ಕಾಣಿಕೆ ನೀಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ನಂದ ಎನ್ ಅವರು ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿ ಮಾತನಾಡುತ್ತಾ ಈ ಶಿಬಿರದ ಆಯೋಜನೆ ಮಾಡಲು ಅನುವು ನೀಡಿದ ಕಾಲೇಜಿನ ಆಡಳಿತ ಮಂಡಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
ಮಣಿಪಾಲ್ ಆಸ್ಪತ್ರೆಯ ನುರಿತ ವೈದ್ಯರ ಸಹಕಾರದೊಂದಿಗೆ ‘ನಿಮ್ಮ ಆರೋಗ್ಯವೇ ನಮ್ಮ ಮೊದಲ ಆದ್ಯತೆ’ ಎಂಬ ಘೋಷ ವಾಕ್ಯದ ಮೂಲಕ ನಡೆದ ಈ ಶಿಬಿರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ತಪಾಸಣೆ ಮಾಡಿಸಿಕೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಸಿಂಧಿ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಶೋಕ್ ಪಿ ನಾರಂಗ್, ಗೌರವ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ಎಂ ಬಜಾಜ್, ಲಿಯೋ ಸಲಹೆಗಾರರಾದ ಲಯನ್ ನೇಹಾ ಬಥೀಜಾ ಅವರು, ಲಯನ್ ಅರುಣ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಗರದ ಪ್ರತಿಷ್ಠಿತ ಪ್ರೌಢ ಶಾಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಾಂಶುಪಾಲರು ಹಾಗೂ ಮುಖ್ಯ ಶಿಕ್ಷಕರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.
ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ಕಾಂಚನ ಅವರು ವಂದನಾರ್ಪಣೆ ಮಾಡಿದರು. ಕಾಲೇಜಿನ ಲಿಯೋ ಕ್ಲಬ್ ಸಂಯೋಜಕಿಯರಾದ ಶ್ರೀಮತಿ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು
