ಭಾರತೀಯ ನಾಗರೀಕತೆಯ ಉಳಿವಿಗೆ ನಮ್ಮ ಭಕ್ತಿ ಪರಂಪರೆ, ಸಂಸ್ಕೃತಿ, ಸಂಸ್ಕಾರಗಳೇ ಕಾರಣ : ಡಾ.ಕೆ.ಸುಧಾಕರ್
ಚೊಕ್ಕನಹಳ್ಳಿಯಲ್ಲಿ ಶ್ರೀ ದಕ್ಷಿಣ ಕಾಳಿಕಾದೇವಿ ನೂತನ ದೇಗುಲ ಉದ್ಘಾಟನೆ :
ಯಲಹಂಕ : ಪ್ರಪಂಚದ ಹಲವು ನಾಗರೀಕತೆಗಳ ವಿನಾಶದ ಮಧ್ಯೆ ನಮ್ಮ ಭಾರತೀಯ ನಾಗರೀಕತೆ ಜೀವಂತವಾಗಿ ಉಳಿದಿರುವುದಕ್ಕೆ ನಮ್ಮ ಭಕ್ತಿ ಪರಂಪರೆ, ಸಂಸ್ಕೃತಿ, ಸಂಸ್ಕಾರಗಳೇ ಕಾರಣ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ಯಲಹಂಕ ಕ್ಷೇತ್ರದ ಚೊಕ್ಕನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ದಕ್ಷಿಣ ಕಾಳಿಕಾದೇವಿ ನೂತನ ದೇಗುಲ, ಶಿಲಾವಿಗ್ರಹ ಪ್ರತಿಷ್ಠಾಪನೆ, ಕಳಸ ಸ್ಥಾಪನೆ‌ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ನಮ್ಮ ಸನಾತನ ಧರ್ಮಕ್ಕೂ, ಭಾರತೀಯ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಇವು ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಒಂದನ್ನು ಬಿಟ್ಟು ಇನ್ನೊಂದಿಲ್ಲ ಎಂಬಂತಿವೆ. ಎಲ್ಲಿ ಶಕ್ತಿ ದೇವತೆಗಳನ್ನು ಆರಾಧಿಸುತ್ತಾರೋ ಅಲ್ಲಿ ಮಹಿಳೆಯರಿಗೆ ವಿಶೇಷವಾದ ಶಕ್ತಿ, ಆರೋಗ್ಯ ಮತ್ತು ಶ್ರೀ ರಕ್ಷೆ ದೊರೆಯುತ್ತದೆ. ಈ ದಿಸೆಯಲ್ಲಿ ನಾವು ನಮ್ಮ ಧಾರ್ಮಿಕ ಪರಂಪರೆಯನ್ನು ಶ್ರದ್ಧೆಯಿಂದ ಪಾಲಿಸಿಕೊಂಡು ಮುಂದೆ ಸಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕೊರಟಗೆರೆ ತಾಲ್ಲೂಕು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಮಹಾಸ್ವಾಮೀಜಿ, ಮೈಸೂರಿನ ಮದ್ಗರಲಿಂಗಯ್ಯನ ಹುಂಡಿ ವಿರಕ್ತಮಠದ ಶ್ರೀ ಗೌರಿಶಂಕರ ಸ್ವಾಮೀಜಿ ಅವರು ವಹಿಸಿದ್ದು, ಕಾರ್ಯಕ್ರಮದಲ್ಲಿ ಬೆಂಗಳೂರು ಹಾಲು ಒಕ್ಕೂಟ(ಬಮೂಲ್)ದ ನಿರ್ದೇಶಕ ಸತೀಶ್ ಕಡತನಮಲೆ, ಹಿರಿಯ ಬಿಜೆಪಿ ಮುಖಂಡ ಎಚ್.ಬಿ.ಹನುಮಯ್ಯ, ಶ್ರೀ ದಕ್ಷಿಣ ಕಾಳಿಕಾದೇವಿ ದೇವಾಲಯದ ಧರ್ಮದರ್ಶಿಗಳು, ಕಟ್ಟೆಮನೆ ಚಾರಿಟಬಲ್ ಟ್ರಸ್ಟ್ ನ‌ ಅಧ್ಯಕ್ಷರಾದ ಡಾ.ಅರುಣ್ ಗುರೂಜಿ, ಚೊಕ್ಕನಹಳ್ಳಿ ಗ್ರಾಮದ ಸಮಾಜ ಸೇವಕರಾದ ರಮೇಶ್, ದಾನಿಗಳಾದ ಅಣ್ಣಾದೊರೈ, ಅರಕೆರೆ ಗ್ರಾ.ಪಂ‌.ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ಮುಖಂಡರಾದ ಐವರಕಂಡಪುರ ಅಜಯ್ ಕುಮಾರ್, ಕೆ.ಸಿ.ಬಾಬು, ಆವಲಹಳ್ಳಿ ಗಿರೀಶ್, ನಂಜುಂಡೇಗೌಡ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *