



















ಕೆಂಪಾಪುರ ವಾರ್ಡ್‌ನ ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ :
ಬ್ಯಾಟರಾಯನಪುರ : ಬಿಜೆಪಿ ಪಕ್ಷದ ಸಂಘಟನೆ, ಬಲವರ್ಧನೆಯ ದಿಸೆಯಲ್ಲಿ ಸಿಗುವ ಚಿಕ್ಕ ಅವಕಾಶವನ್ನು ಸಹ ಕೈಚೆಲ್ಲದೆ, ಸದುಪಯೋಗ ಪಡಿಸಿಕೊಂಡು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಒಂದು ಸುಭದ್ರವಾದ ನೆಲೆ ಕಲ್ಪಿಸುವ ಮೂಲಕ ಮುಂಬರುವ ಸರಣಿ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು ತಂದು ಕೊಡುವುದು ನಮ್ಮ ಆದ್ಯತೆಯಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ಕೆಂಪಾಪುರ ವಾರ್ಡ್ ನಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಟಿ.ರಮೇಶ್, ಹಿಂದುಳಿದ ವರ್ಗಗಳ ಮುಖಂಡ ರಾಜು ಹಾಗೂ ಅವರ ಬೆಂಬಲಿಗರನ್ನು ಆತ್ಮೀಯವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಅವರು ‘ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಅಭಿವೃದ್ಧಿ ಶೂನ್ಯವಾದ ಕಾರ್ಯವೈಖರಿ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಎಡೆಬಿಡದೆ ನಡೆಯುತ್ತಿರುವ ಪೈಪೋಟಿ, ಭ್ರಷ್ಟಾಚಾರ, ಜನವಿರೋಧಿ ನೀತಿಯಂತಹ ವಿಲೋಮಗಳಿಂದಾಗಿ ರಾಜ್ಯದ ಜನತೆ ಬೇಸತ್ತಿದ್ದು, ಕಾಂಗ್ರೆಸ್ ಸರ್ಕಾರವನ್ನು ಕೆಳಗಿಳಿಸಲು ಚುನಾವಣೆಗಾಗಿ ಕಾಯುತ್ತಿದ್ದಾರೆ.
ಅಂತೆಯೇ ಬ್ಯಾಟರಾಯನಪುರ ಕ್ಷೇತ್ರದ ಜನತೆ ತಮ್ಮ ಮೂಲಭೂತ ಸೌಕರ್ಯಗಳು, ಸಮಸ್ಯೆಗಳನ್ನು ಹೇಳಿಕೊಳ್ಳಲಾಗದ ದಯಾನೀಯ ಪರಿಸ್ಥಿತಿಯಲ್ಲಿದ್ದಾರೆ.
ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸುವ, ಪ್ರತಿಭಟನೆ ನಡೆಸುವ ಮುಕ್ತವಾದ ಸ್ವಾತಂತ್ರ್ಯ ಇಲ್ಲ, ಜನಪರ ಚಳವಳಿ, ಪ್ರತಿಭಟನೆಗಳನ್ನು ಪೊಲೀಸ್ ಶಕ್ತಿ ಬಳಸಿ ಹತ್ತಿಕ್ಕಲಾಗುತ್ತಿದೆ. ಇಂತಹ ಪ್ರಾಯೋಜಿತ ಬೆದರಿಕೆಗಳಿಗೆ ಸೊಪ್ಪು ಹಾಕುವ ಪ್ರಮೇಯವೇ ಇಲ್ಲ, ‘ಕಾಂಗ್ರೆಸ್ ತೊಲಗಿಸಿ ಬ್ಯಾಟರಾಯನಪುರ ಉಳಿಸಿ’ ಎಂಬ ಬೃಹತ್ ಅಭಿಯಾನದ ಮೂಲಕ ಕ್ಷೇತ್ರದಲ್ಲಿನ ಮೂಲಭೂತ ಸಮಸ್ಯೆಗಳ ಕುರಿತು ಜನಜಾಗೃತಿ ಮೂಡಿಸುವ ದಿಸೆಯಲ್ಲಿ ರೂಪುರೇಷೆಗಳನ್ನು ಸಿದ್ಧಗೊಳಿಸಲಾಗುತ್ತಿದೆ. ನಮ್ಮ ಈ ಸತ್ಕಾರ್ಯಗಳಿಗೆ ಇಂಬು ನೀಡುವಂತೆ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ತಂಡೋಪ-ತಂಡವಾಗಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾ ಗುತ್ತಿರುವುದು ನಮ್ಮ ಆತ್ಮಸ್ಥೈರ್ಯವನ್ನು ಹೆಚ್ವಿಸಿದ್ದು, ಮುಂದಿನ ದಿನಗಳಲ್ಲಿ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿ ಸೇರ್ಪಡೆಯ ಬಹುದೊಡ್ಡ ಅಭಿಯಾನ ಆರಂಭವಾಗಲಿದೆ. ಇಂದು ಕಾಂಗ್ರೆಸ್ ಪಕ್ಷದ ವಾರ್ಡ್ ಅಧ್ಯಕ್ಷರಾಗಿದ್ದ ಟಿ.ರಮೇಶ್, ಹಿಂದುಳಿದ ವರ್ಗಗಳ ಮುಖಂಡ ರಾಜು ಹಾಗೂ ಅವರ ಹಲವಾರು ಬೆಂಬಲಿಗರು ಕಾಂಗ್ರೆಸ್ ತೊರೆದು, ಬಿಜೆಪಿ ಪಕ್ಷದ ಸುಭದ್ರ ರಾಷ್ಡ್ರನಿರ್ಮಾಣದ ತತ್ವ ಸಿದ್ದಾಂತವನ್ನು ಒಪ್ಪಿ ಸೇರ್ಪಡೆಯಾಗಿದ್ದು, ಅವರನ್ನು ಬಿಜೆಪಿ ಪಕ್ಷದಲ್ಲಿ ಅತ್ಯಂತ ಗೌರವಾದರಗಳಿಂದ ನಡೆಸಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಬ್ಯಾಟರಾಯನಪುರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ, ಸೇರ್ಪಡೆ ಕಾರ್ಯಕ್ರಮದ ರುವಾರಿ ವಿಲ್ಸನ್ ರೆಡ್ಡಿ, ನಗರ ಮಂಡಲ ಉಪಾಧ್ಯಕ್ಷರಾದ ಚಂದ್ರಶೇಖರರೆಡ್ಡಿ, ಗೋಪಿನಾಥ್ ರೆಡ್ಡಿ, ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ, ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ಗೌಡ, ಬ್ಯಾಟರಾಯನಪುರ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ರವರು ಓಬಿಸಿ ಮೋರ್ಚಾದ ಮುನಿಸ್ವಾಮಿ ಒಡೆಯರ್ (ಆನಂದ್ ಮಾಸ್ಟರ್), ಕೆಂಪಾಪುರ ವಾರ್ಡ್ ಅಧ್ಯಕ್ಷೆ ಉಷಾ ಮುನಿತಾಯಪ್ಪ ಮಂಜುನಾಥ್ ಪಾಲನೆ ಹಳ್ಳಿ ಸೇರಿದಂತೆ ಇನ್ನಿತರರಿದ್ದರು.
