ಸದಾ ಜನರೊಟ್ಟಿಗಿರುವ ನಮಗೆ ಚುನಾವಣೆಗಾಗಿ ಪ್ರತ್ಯೇಕ ಸಿದ್ಧತೆಯ ಅವಶ್ಯಕತೆಯಿಲ್ಲ : ಎಸ್ ಆರ್ ವಿಶ್ವನಾಥ್

ಅಟ್ಟೂರು, ಬೆಟ್ಟಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ 15 ಕೋಟಿ ರು.ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ :

ಯಲಹಂಕ : ಸದಾ ಜನರೊಟ್ಟಿಗಿದ್ದು, ಅವರ ಗ್ರಾಮ, ಬಡಾವಣೆಗಳಲ್ಲಿ ನಿರಂತರವಾಗಿ ಒಂದಿಲ್ಲೊಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಾ ಸದಾ ಜನಸ್ಪಂದನೆಯ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಿರುವ ನಮಗೆ ಜಿಬಿಎ ಚುನಾವಣೆ ಇರಲಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯತಿ ಹೀಗೆ ಯಾವುದೇ ಚುನಾವಣೆಗಾಗಿ‌ ಪ್ರತ್ಯೇಕ ಸಿದ್ಧತೆ, ಪೂರ್ವತಯಾರಿ ಅಗತ್ಯವಿಲ್ಲ, ಅದೇನಿದ್ದರೂ ಚುನಾವಣೆಯ ಏಕೈಕ ಉದ್ದೇಶವಿಟ್ಟುಕೊಂಡು ಐದು ವರ್ಷಕ್ಕೊಮ್ಮೆ ಜನರಿಗೆ ಮುಖ ತೋರಿಸುವ ಮುಖಂಡರಿಗೆ ಮಾತ್ರ ಅವಶ್ಯಕತೆಯಿದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ತಿಳಿಸಿದರು.

ಯಲಹಂಕ ನಗರ ವ್ಯಾಪ್ತಿಯ ಅಟ್ಟೂರು ಮತ್ತು ಬೆಟ್ಟಹಳ್ಳಿ ವಾರ್ಡ್ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ರಸ್ತೆ, ಚರಂಡಿ, ಉದ್ಯಾನವನ, ಪಾದಚಾರಿ‌‌ ಮಾರ್ಗ ಸೇರಿದಂತೆ ಸುಮಾರು 15 ಕೋಟಿ ರು. ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು ‘ಯಲಹಂಕ ನಗರ ವ್ಯಾಪ್ತಿಯ ಎಲ್ಲಾ ಏಳು ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದ್ದು, ಅಟ್ಟೂರು ಮತ್ತು ಬೆಟ್ಟಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ 110 ಗ್ರಾಮಗಳ ಯೋಜನೆ ಅಡಿಯಲ್ಲಿ ಕಾವೇರಿ ನೀರು ಸರಬರಾಜಿಗೆ ಪೈಪ್ ಲೈನ್ ಅಳವಡಿಸಿದ್ದ ರಿಂದಾಗಿ ರಸ್ತೆಗಳು ಹಾಳಾಗಿದ್ದವು ಈ ದಿಸೆಯಲ್ಲಿ ಇಲ್ಲಿಂದಲೇ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದೆ ಉಳಿದ ವಾರ್ಡ್ ಗಳಲ್ಲಿಯೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಮುಂಬರಲಿರುವ ಚುನಾವಣಾ ಸಿದ್ಧತೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಚುನಾವಣಾ ಸಿದ್ಧತೆ, ಪೂರ್ವ ತಯಾರಿ ಬೇಕಿರುವುದು ಚುನಾವಣೆಯ ಏಕೈಕ ಉದ್ದೇಶಕ್ಕಾಗಿ ಐದು ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುವ ಅಪರೂಪದ ನಾಯಕರಿಗೆ,ಅಂಥವರು ಇದೀಗ ಚುನಾವಣೆಯ ಏಕಮೇವ ಉದ್ದೇಶಕ್ಕಾಗಿ, ಕ್ರಿಕೆಟ್‌ ಆಡಿಸುವುದು, ಗೋಲಿ, ಬುಗುರಿ‌ ಆಡಿಸುವ ಕೆಲಸದಲ್ಲಿ‌ ತೊಡಗಿದ್ದಾರೆ. ಆದರೆ ನಾವು ಮತ್ತು ನಮ್ಮ ಕಾರ್ಯಕರ್ತರು ವರ್ಷವಿಡೀ ಜನರ ಮದ್ಯೆ ಇರುತ್ತೇವೆ, ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ನೀಡುವ ದಿಸೆಯಲ್ಲಿ ಕಾರ್ಯಮಗ್ನರಾಗಿರುತ್ತೇವೆ, ಯಲಹಂಕ ನಗರದ ಪ್ರತಿ ವಾರ್ಡ್ ಗಳಲ್ಲೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ, ಅಂತೆಯೇ ಯುವಕರು, ಮಹಿಳೆಯರು ಸೇರಿದಂತೆ ವಿವಿಧ ವಯೋಮಾನದವರಿಗೆ ಆಟೋಟಗಳು, ಸಾಂಸ್ಕೃತಿಕ ಮತ್ತು ‌ಮನರಂಜನಾ ಕಾರ್ಯಕ್ರಮಗಳನ್ನು ಸದಾ ಆಯೋಜಿಸುತ್ತಲೇ ಇರುತ್ತೇವೆ, ಈ ಮೂಲಕ ಜನರೊಟ್ಟಿಗೆ ಸದಾ ಇರುವ ನಮಗೆ, ನಮ್ಮ ಕಾರ್ಯಕರ್ತರಿಗೆ ವಿಶೇಷ ರೀತಿಯ ಚುನಾವಣಾ ತಯಾರಿ, ಪೂರ್ವಸಿದ್ಧತೆಯ ಅವಶ್ಯಕತೆ ಇಲ್ಲ , ನಿತ್ಯವೂ ನಮ್ಮದು ಕಾರ್ಯಮಗ್ನತೆಯ ಗುಣ ಎಂದರು.

ಇದೇ ಸಂದರ್ಭದಲ್ಲಿ ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ‌ಎಂ.ಮುನಿರಾಜು, ಪ್ರಧಾನ ಕಾರ್ಯದರ್ಶಿಗಳಾದ ವಿ.ಎಂ.ಈಶ್ವರ್, ವಿ.ಪವನ್ ಕುಮಾರ್, ಹಿರಿಯ ಬಿಜೆಪಿ ಮುಖಂಡರಾದ ಡಾ.ಶಶಿಕುಮಾರ್, ಎ.ಸಿ.ಮುನಿಕೃಷ್ಣಪ್ಪ, ಚೊಕ್ಕನಹಳ್ಳಿ ವೆಂಕಟೇಶ್, ಮಧುಸೂದನ್, ಎಸ್.ಸಿ.ಮೋರ್ಚಾ ಅಧ್ಯಕ್ಷ ಕೆ.ಎಂ.ಮುರಳಿ, ಎಸ್.ಟಿ.ಮೋರ್ಚಾ ಅಧ್ಯಕ್ಷ ಮೋಹನ್, ಅಟ್ಟೂರು ವಾರ್ಡ್ ಅಧ್ಯಕ್ಷ ನಾರಾಯಣಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ಎಸ್.ಎಚ್.ಕಿರಣ್,‌ ಗೌತಮ್, ಅಟ್ಟೂರು ವಾರ್ಡ್ ಎಸ್ಸಿ ಮೋರ್ಚಾ ಅಧ್ಯಕ್ಷ ಸುನಿಲ್ ಕುಮಾರ್, ಯಲಹಂಕ ಜಯಣ್ಣ, ಬೆಂಗಳೂರು ಉತ್ತರ ವಲಯ ಮುಖ್ಯ ಅಭಿಯಂತರರಾದ ಸುಧಾಕರ್ ರೆಡ್ಡಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಮಸಂಜೀವಯ್ಯ, ಮೋಹನ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *