












ದಿನಾಂಕ 28.02.2026ರಂದು ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ನಂದ ಎನ್ ಅವರು ಮಾತನಾಡಿ ನಮ್ಮ ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಸಮಾರಂಭಕ್ಕೆ ನೀವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭದ ಯಶಸ್ಸಿಗೆ ಕಾರಣರಾಗಿದ್ದೀರಿ. ನೀವೆಲ್ಲರೂ ನಮ್ಮ ಕಾಲೇಜಿನ ಪ್ರೌಢ ವಿದ್ಯಾರ್ಥಿಗಳು; ನಮ್ಮ ಕಾಲೇಜಿನ ಶ್ರೇಷ್ಠ ರಾಯಭಾರಿಗಳು ಎಂದು ತಿಳಿಸಿದರು. ನೀವು ಈ ಕಾಲೇಜಿನಲ್ಲಿ ಕಳೆದ ಹಳೆಯ ನೆನಪುಗಳು, ಅನುಭವಗಳು ಹಚ್ಚ ಹಸಿರಾಗಿವೆ. ಅದನ್ನು ಜತನದಿಂದ ಕಾಪಾಡಿಕೊಳ್ಳಲು ನೀವೆಲ್ಲರೂ ಕಾಲೇಜಿನೊಂದಿಗೆ ಸಂಪರ್ಕದಲ್ಲಿದ್ದು ಕಾಲೇಜಿನ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಅವರು ಕರೆ ನೀಡಿದರು.
ಹಲವು ಹಳೆ ವಿದ್ಯಾರ್ಥಿಗಳು ಅತ್ಯಂತ ಅಭಿಮಾನದಿಂದ ಕಾಲೇಜಿನ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡು ಸಿಂಧಿ ಪದವಿಪೂರ್ವ ಕಾಲೇಜು ಏರುಗತಿಯಲ್ಲಿ ಸಾಗುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು.
ಸಿಂಧಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಎಫ್ ಮಾಧ್ವಾನಿಯವರು, ಸಿಂಧಿ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಶೋಕ್ ಪಿ ನಾರಂಗ್ ಅವರು ಹಾಗೂ ಕಾಲೇಜಿನ ಎಲ್ಲಾ ಪದಾಧಿಕಾರಿಗಳು ಸಮಾರಂಭದ ಅಭೂತಪೂರ್ವ ಯಶಸ್ಸಿಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಸಮಾರಂಭವು ಹಳೆಯ ವಿದ್ಯಾರ್ಥಿ ಕೂಟದ ಉದ್ಘಾಟನೆಯೊಂದಿಗೆ ಆರಂಭವಾಗಿ ಪ್ರಾಂಶುಪಾಲರ ಪ್ರಾಸ್ತಾವಿಕ ಭಾಷಣ, ಹಳೆಯ ವಿದ್ಯಾರ್ಥಿಗಳ ಕಾಲೇಜಿನ ಸವಿ ನೆನಪಿನ ಚರ್ಚೆ, ಕಾಲೇಜಿನ ಉನ್ನತಿಗೆ ಸಲಹೆ ಸೂಚನೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು.
ಕಾರ್ಯಕ್ರಮದ ನಡುವೆ 2025-26ನೇ ಸಾಲಿನ ಜೆಇಇ ಸೆಷನ್ 2ರಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ಕಾಂಚನ ಅವರು, ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಿಲನ್ ಗುಪ್ತ ಅವರು, ಹಾಗೂ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿಜ್ಞಾನ ವಿಭಾಗದ ಆಂಗ್ಲ ಉಪನ್ಯಾಸಕಿಯರಾದ ಸೌಜನ್ಯ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
