










ವಿಜೃಂಭಣೆಯಿಂದ ನೆರವೇರಿದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವ :
ಬ್ಯಾಟರಾಯನಪುರ : ಕ್ಷೇತ್ರದ ಹುಣಸಮಾರನಹಳ್ಳಿಯ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವ ಕುರಿತು ಹುಣಸುಮಾರನಹಳ್ಳಿ ಶ್ರೀಮಠದ ಪಟ್ಟದ ಶ್ರೀ ಗುರುನಂಜೆಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ‘ ಶ್ರೀ ಚಂದ್ರಮೌಳೇಶ್ವರ ಸ್ವಾಮಿಗೆ ಪ್ರತಿ ವರ್ಷ ಸ್ವಾಮಿಯ ಇಚ್ಛೆಯಂತೆ, ಪಟ್ಟದ ಶ್ರೀ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳ ಆಶೀರ್ವಾದದೊಂದಿಗೆ ರಥೋತ್ಸವ ನೆರವೇರಿಸಲಾಗುತ್ತಿದೆ. ರಥೋತ್ಸವದ ಅಂಗವಾಗಿ ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮೊದಲ ದಿನ ಅಂಕುರಾರ್ಪಣ, ಸಿಂಹವಾಹನೋತ್ಸವ, ಎರಡನೆಯ ದಿನ ಧ್ವಜಾರೋಹಣ, ಗಜವಾಹನೋತ್ಸವ, ಮೂರನೆಯ ದಿನ ಗಿರಿಜಾ ಕಲ್ಯಾಣೋತ್ಸವ ವೃಷಭ ವಾಹನೋತ್ಸವ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವ ನೆರವೇರಿದೆ. ರಥೋತ್ಸವದ ಮುಂದುವರಿದ ಭಾಗವಾಗಿ ನಂದಿವಾಹನೋತ್ಸವ ಚಿತ್ರ ಗೋಪುರೋತ್ಸವ ವಸಂತೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ ದೊಂದಿಗೆ ರಥೋತ್ಸವ ತೆರೆ ಕಾಣಲಿದೆ. ರಥೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲಾ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಏರ್ಪಡಿಸಲಾಗಿರುತ್ತದೆ ಎಂದು ರಥೋತ್ಸವ ಕುರಿತು ಮಾಹಿತಿ ನೀಡಿದರು.
ರಥೋತ್ಸವದ ಈ ದೈವ ಕಾರ್ಯದಲ್ಲಿ ಬೆಂಗಳೂರು ನಗರದ ಗಂಜಾಂ ಮಠದ ಶ್ರೀ ಚಿದ್ಘನ ಸ್ವಾಮೀಜಿ, ಕಿರಿಯ ಶ್ರೀಗಳಾದ ಶ್ರೀ ಅಮೃತಕುಮಾರ ಸ್ವಾಮೀಜಿ, ತಮಿಳುನಾಡಿನ ಗುಮ್ಮಳಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತಮಿಳುನಾಡಿನ ಬಳ್ಳನಪುರ ಮಠದ ಶ್ರೀ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಮಾಲೂರಿನ ಬೆಳ್ಳಾವಿ ಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ, ವಿಜಯಪುರ ಮಠದ ಶ್ರೀ ಮಹಾದೇವ ಸ್ವಾಮೀಜಿ, ತಮಿಳುನಾಡಿನ ಶ್ರೀ ಶಿವಪಂಚಾಕ್ಷರಿ ಸ್ವಾಮೀಜಿ, ಖಾನೆ ಮಠದ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು, ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ರಥೋತ್ಸವಕ್ಕೆ ವಿಶೇಷತೆಯ ಮೆರಗು ನೀಡಿದರು.
