ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜಾಗರಣ ಸಮಾವೇಶ *
ಬೆಂಗಳೂರು: ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಬೆಂಗಳೂರು ಮಹಾನಗರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಜಾಗರಣ ಸಮಾವೇಶವನ್ನು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಯಾದವ ಸ್ಮೃತಿ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತೆ ಕೆ.ಎಚ್. ಸಾವಿತ್ರಿ ಸುರೇಶ್ ಕುಮಾರ್ ಅವರು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಅವರು ಮಾತನಾಡುತ್ತಾ, ಮಹಿಳೆಯರು ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಾ ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಇದಕ್ಕಾಗಿ ಮಹಿಳೆಯರು ತಮ್ಮ ಮೇಲೆ ಹೆಮ್ಮೆ ಹೊಂದಬೇಕು ಎಂದು ಹೇಳಿದರು. ಮಹಿಳೆಯರು ಯಾವುದೇ ಆಮಿಷಗಳಿಗೆ ಅಥವಾ ಜಾಹೀರಾತುಗಳಿಗೆ ಮಾರುಹೋಗದೆ ಆತ್ಮವಿಶ್ವಾಸದಿಂದ ಯಶಸ್ವಿ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಕಾನೂನು ತಜ್ಞೆ ಮೀರಾ ಪಡಿಕೆ ಅವರು ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳನ್ನು ತಿಳಿದುಕೊಂಡು ಕಾನೂನು ಕಾಯ್ದೆಗಳನ್ನು ಹೆಚ್ಚು ಹೆಚ್ಚು ಸದುಪಯೋಗಪಡಿಸಿಕೊಳ್ಳಬೇಕು ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.
ಚರ್ಚಾಗೋಷ್ಠಿಯನ್ನು ನಡೆಸಿಕೊಟ್ಟ ಅಡ್ವಕೇಟ್ ಅಂಬಿಕಾ ಅವರು ಗ್ರಾಹಕರಾಗಿ ದಾರಿ ತಪ್ಪಿಸುವ ಜಾಹೀರಾತುಗಳಿಂದ ಎಚ್ಚರ ವಹಿಸುವ ಅಗತ್ಯವಿದೆ ಎಂದು ತಿಳಿಸಿದರು. ತಪ್ಪು ದಾರಿಗೆಳೆಯುವ ಜಾಹೀರಾತುಗಳು ದಾರಿ ತಪ್ಪಿಸುವ ಜಾಹೀರಾತುಗಳು, ಅನ್ಯಾಯಕರ ವ್ಯಾಪಾರ ಪದ್ಧತಿಗಳು ಹಾಗೂ ಸೈಬರ್ ಅಪರಾಧಗಳ ಮೂಲಕ ಮಹಿಳೆಯರು ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕಾನೂನಿನ ಮೂಲಕ ಕ್ರಮ ಕೈಗೊಳ್ಳಲು ಅವಕಾಶವಿದ್ದು, ಅದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ವಿಜಯ ವಿಷ್ಣು ಭಟ್ ಅವರು ಮಾತನಾಡಿ, ಗ್ರಾಹಕ ಪಂಚಾಯಿತ್ ಆಯೋಜಿಸಿರುವ ಈ ಮಹಿಳಾ ಸಮಾವೇಶವು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಪ್ರಯತ್ನವಾಗಿದೆ. ಜಾಹೀರಾತಿನ ಆಮಿಷಗಳಿಗೆ ಮಾರುಹೋಗದಂತೆ ಸಮಾಜದಲ್ಲಿ ಅರಿವು ಮೂಡಿಸಲು ಎಲ್ಲರೂ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸೋಣ ಎಂದು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಮಂಜುಳಾ ಅಕ್ಕ ಅವರು ಗ್ರಾಹಕ ಗೀತೆಯನ್ನು ಮನಮೋಹಕವಾಗಿ ಹಾಡಿದರು. ಅನೇಕ ಪ್ರಬುದ್ಧ ಮಹಿಳೆಯರು ಹಾಗೂ ಪುರುಷ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕೊನೆಯಲ್ಲಿ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನವಾಯಿತು

Leave a Reply

Your email address will not be published. Required fields are marked *