ಗ್ರಾಮ ದೇವತೆ ಶ್ರೀ ಮಾರಮ್ಮ ದೇವಿ ಸಹಿತ ಪಂಚ ಮಾತೃಕೆಯರ ಪ್ರತಿಷ್ಠಾಪನಾ ಮಹೋತ್ಸವ :

ಯಲಹಂಕ : ಯಲಹಂಕ ನಗರದ ವೆಂಕಟಾಲ ಗ್ರಾಮದ ಕೆರೆ ಕೋಡಿ ರಸ್ತೆಯಲ್ಲಿ ದಾನಿಗಳ ನೆರವಿನೊಂದಿಗೆ ನೂತನವಾಗಿ ನಿರ್ಮಿಸಿರುವ ಶ್ರೀ ಮಾರಮ್ಮ ದೇವಿ, ಶ್ರೀ ಅಣ್ಣಮ್ಮ ದೇವಿ, ಶ್ರೀ ಗಂಗಮ್ಮ ದೇವಿ, ಚೌಡೇಶ್ವರಿ ದೇವಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಿ ಸಹಿತ ಪಂಚ ಮಾತೃಕೆಯರ ಪ್ರತಿಷ್ಠಾಪನಾ ಮಹೋತ್ಸವ ಮತ್ತು ದೇವಾಲಯ ಲೋಕಾರ್ಪಣೆ ಕಾರ್ಯಕ್ರಮವನ್ನು ಏಪ್ರಿಲ್ 26ರ ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಧರ್ಮದರ್ಶಿಗಳು, ಮಾಜಿ ಬಿಬಿಎಂಪಿ ಸದಸ್ಯರಾದ ಕೆಂಪೇಗೌಡ ಅವರು ತಿಳಿಸಿದ್ದಾರೆ.

ಪಂಚ ಮಾತೃಕೆಯರ ಪ್ರತಿಷ್ಠಾಪನೆ ಮತ್ತು ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಏಪ್ರಿಲ್ 24ರ ಶುಕ್ರವಾರ ಸಂಜೆ 3 ಗಂಟೆಗೆ ಮಹಾ ಗಣಪತಿ ಪೂಜೆ, ಗಂಗಾ ಪೂಜೆ, ಮಂಗಳವಾದ್ಯದೊಂದಿಗೆ ಬ್ರಹ್ಮಕಲಶ ಪುರಪ್ರದಕ್ಷಣೆ, ಆಲಯ ಪ್ರವೇಶ, ಆಚಾರ್ಯ ಋತ್ವಿಕ್ ವರ್ಣನೆ, ಪಂಚ ಗವ್ಯದಿಂದ ಆಲಯ ಶುದ್ಧಿ, ರಕ್ಷಾ ಬಂಧನ, ದೇವನಾಂದಿ, ಮೃತ್ಸಂಗ್ರಹಣ, ಅಂಕುರಾರ್ಪಣೆ ಧ್ವಜಾರೋಹಣ, ಮಂಟಪ ಆರಾಧನೆ, ಯಾಗ ಶಾಲಾ ಪ್ರವೇಶ, ಮಹಾಗಣಪತಿ ವಾಸ್ತು ರಕ್ಷೋಗ್ನ, ನವಗ್ರಹ ಹೋಮ, ಪ್ರಸಾದ ವಾಸ್ತು ಬಲಿ ಮುಂತಾದ ಪೂರ್ವಭಾವಿ ದೈವ ಕಾರ್ಯಗಳು ನಡೆಯಲಿದೆ.

ಏಪ್ರಿಲ್ 25ರ ಶನಿವಾರ ಬೆಳಿಗ್ಗೆ ಎಂಟು ಗಂಟೆಯಿಂದ ಪೂಜೆ ಪ್ರಾರಂಭವಾಗಲಿದ್ದು, ಮಹಾಸಂಕಲ್ಪ, ಕಲಾಷಾರಾಧನೆ, ಆಲಯ ಕಳಹೋಮ, ಬಿಂಬಶುದ್ಧಿ, ಬಿಂಬ ಶುದ್ಧಾಂಗ ಹೋಮ, ದುರ್ಗಾ ಸಪ್ತಶತಿ ಹೋಮ, 12 ಗಂಟೆಗೆ ಮಹಾಪೂರ್ಣಾಹುತಿ ನೆರವೇರಲಿದೆ. ಸಂಜೆ 4 ಗಂಟೆಗೆ ಚರಬಿಂಬ, ಆಲಯ ಪ್ರದಕ್ಷಿಣೆ, ಅಷ್ಟಬಂಧನವಿಧಿನ್ಯಾಸಾಧಿ ಹೋಮ ಹಾಗೂ ಪ್ರತ್ಯಂಗಿರಾ ಹೋಮ, ಪೂರ್ಣಾಹುತಿ ಕಾರ್ಯಕ್ರಮಗಳಿವೆ.

ಏಪ್ರಿಲ್ 26ರಂದು ನೆರವೇರಲಿರುವ ಪಂಚ ಮಾತೃಕೆಯರ ಪ್ರತಿಷ್ಠಾಪನೆ ಮತ್ತು ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದೊಂದು ಭಕ್ತಾದಿಗಳಿಗೆ ಅನ್ನಸಂತರ್ಪಣೆ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮವಿರುತ್ತದೆ. ಮಹತ್ವದ ಈ ದೈವ ಕಾರ್ಯದ ದಿವ್ಯ ಸಾನಿಧ್ಯವನ್ನು ದಾಬಸ್ ಪೇಟೆಯ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ಬಸವ ರಮಾನಂದ ಮಹಾಸ್ವಾಮಿಜಿ ವಹಿಸಲಿದ್ದು, ಸಮಾರಂಭದಲ್ಲಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ, ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಡಾ. ವಾಣಿಶ್ರೀ ವಿಶ್ವನಾಥ್, ದೊಡ್ಡಬಳ್ಳಾಪುರ ಶಾಸಕರು, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಧೀರಜ್ ಮುನಿರಾಜ್, ಬೆಂ.ಅಂ.ವಿ.ನಿ. ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ ರವಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್ ಸಿ ತಮ್ಮೆಶ್ ಗೌಡ, ಮಾಜಿ ಬಿಬಿಎಂಪಿ ಸದಸ್ಯರಾದ ಚಂದ್ರಮ್ಮ ಕೆಂಪೇಗೌಡ, ದೇವಾಲಯದ ನಿವೇಶನ ದಾನಿಗಳಾದ ಗುಳ್ಳಪ್ಪ, ಸಹೋದರರಾದ ಪುಳ್ಳಪ್ಪ, ಕೃಷ್ಣಪ್ಪ ಭಾಗವಹಿಸಲಿದ್ದು, ಕಾರ್ಯಕ್ರಮದ ಉಸ್ತುವಾರಿಯನ್ನು ಮುಖಂಡರಾದ ವಿ.ಎಂ.ಸುರೇಶ್ ವಿ.ಎಂ.ಚಂದ್ರಯ್ಯ, ವಿ.ಎಂ.ಈಶ್ವರ್, ಚಿಕ್ಕ ಆಡುಗೋಡಿಯ ಜಿ.ಯು. ವಿಶ್ವನಾಥ್, ಕಂಟ್ರಾಕ್ಟರ್ ರಾಜಣ್ಣ, ಮುನಿಯಪ್ಪ, ಸುಬ್ಬರಾಯಪ್ಪ, ಪೂಜಮ್ಮ ಸೇರಿದಂತೆ ಯುವ ವೇದಿಕೆಯ ಪದಾಧಿಕಾರಿಗಳು ವಹಿಸಲಿದ್ದಾರೆ.

ದೇವಾಲಯದ ಪ್ರಧಾನ ಅರ್ಚಕರಾದ ವೇ.ಶ್ರೀ. ರಾಜೇಶ್ ಭಟ್ ಹಾಗೂ ಆಗಮಿಕರು ಮತ್ತು ಋತ್ವಿಜರ ವೃಂದ ಪ್ರತಿಷ್ಠಾಪನ ಮಹೋತ್ಸವದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಕೊಡಲಿದ್ದಾರೆ.

ಮಹತ್ವದ ಈ ದೈವ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತು, ತನು,ಮನ, ಧನ ಸಹಿತವಾದ ಸಹಕಾರ ನೀಡಿರುವ ಸಹೃದಯಿ ದಾನಿಗಳ ಅನುಪಮ ಕೊಡುಗೆಯನ್ನು ಧರ್ಮದರ್ಶಿಗಳಾದ ಕೆಂಪೇಗೌಡ ಅವರು ಹೃನ್ಮನಪೂರ್ವಕವಾಗಿ ಸ್ಮರಿಸಿದ್ದು, ಈ ದೈವ ಕಾರ್ಯದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.

Leave a Reply

Your email address will not be published. Required fields are marked *