ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಾನಸ ಕೃಷ್ಣ ಅವಿರೋಧ ಆಯ್ಕೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಸಾತನೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಮಾನಸ ಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷೆಯಾಗಿದ್ದ ಸುಜಾತ ಆನಂದ್ ಅವರ ರಾಜೀನಾಮೆ ಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಒಟ್ಟು 11 ಸದಸ್ಯರನ್ನು ಹೊಂದಿರುವ ಪಂಚಾಯಿತಿಯಲ್ಲಿ ಮಾನಸ ಕೃಷ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ಇದೇ ವೇಳೆ ನೂತನ ಅಧ್ಯಕ್ಷೆ ಮಾನಸ ಕೃಷ್ಣ ಅವರು ಮಾತನಾಡಿ ‘ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಜೆಜೆಎಂ ಯೋಜನೆಯಡಿ ಸಾತನೂರು ಮತ್ತು ಶ್ರೀನಿವಾಸಪುರದಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಹೊಸಹಳ್ಳಿಯಲ್ಲಿ ಅಂತಿಮ ಹಂತದಲ್ಲಿದೆ. ಕಾಮಗಾರಿ ಪೂರ್ಣಗೊಂಡ ತಕ್ಷಣ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗುವುದು. ನೂತನ ಪಂಚಾಯಿತಿ ಕಟ್ಟಡ ನಿರ್ಮಾಣ, ರಸ್ತೆ ಹಾಗೂ ಚರಂಡಿ ಅಭಿವೃದ್ಧಿ, ಕಸದ ಸಮಸ್ಯೆ ನಿವಾರಣೆ ಮತ್ತು ನೈರ್ಮಲ್ಯ ಕಾಪಾಡುವಂತಹ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ನೂತನ ಅಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ಹಲವು ಮುಖಂಡರು ಸನ್ಮಾನಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಮಾಲಾ ಸುಬ್ರಮಣಿ, ಮಾಜಿ ಅಧ್ಯಕ್ಷರಾದ ಶಿವಣ್ಣ, ಕೃಷ್ಣಪ್ಪ.ಎಂ, ಸದಸ್ಯೆ ಅಶ್ವಿನಿ‌ ನವೀನ್, ಕರವೇ ರಾಜ್ಯ ಕಾರ್ಯದರ್ಶಿ ಆರ್‌.ಸುರೇಶ್‌, ಬಿಜೆಪಿ ಮುಖಂಡರಾದ ಆನಂದಗೌಡ, ಸುಬ್ರಮಣಿ, ಬಿ.ಆರ್‌.ಮುನಿರಾಜು, ಸೈಯದ್ ಮುನ್ನ, ಸಾಧಿಕ್ ಪಾಷಾ, ಅವಲಪ್ಪ, ನಾಗರಾಜ್, ರಾಮೇಗೌಡ, ತ್ಯಾಗರಾಜು ಸೇರಿದಂತೆ  ಗ್ರಾಮದ ಮುಖಂಡರಿದ್ದರು.

Leave a Reply

Your email address will not be published. Required fields are marked *