







ಹಲವು ಗಣ್ಯರಿಂದ ಶುಭ ಹಾರೈಕೆ :
ಬೆಂಗಳೂರು : ವಿಧಾನ ಪರಿಷತ್ ಮಾಜಿ ಸಚೇತಕರು, ಹೆಬ್ಬಾಳ ಕ್ಷೇತ್ರದ ಮಾಜಿ ಶಾಸಕರಾದ ಡಾ.ವೈ.ಎ.ನಾರಾಯಣಸ್ವಾಮಿ ಅವರ ಜನ್ಮದಿನಾಚರಣೆ ಪ್ರಯುಕ್ತ ‘ಡಾ.ವೈ.ಎ.ಎನ್.ಸ್ನೇಹಿತರ ಬಳಗ’ದ ವತಿಯಿಂದ ನಗರದ ಡಾಲರ್ಸ್ ಕಾಲೋನಿಯಲ್ಲಿನ ಅವರ ಸ್ವಗೃಹದ ಬಳಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿವ್ಯಾಂಗರಾಗಿದ್ದು ಅನುಪಮ ಸಾಧನೆ ಮಾಡಿ ಪದ್ಮಶ್ರೀ ಪುರಸ್ಕೃತರಾಗಿರುವ ಡಾ.ರಾಜಣ್ಣ ಮತ್ತು ಸಮಾಜ ಸೇವೆಯ ಮೂಲಕ ಪ್ರಖ್ಯಾತಿ ಪಡೆದು ಪದ್ಮಶ್ರೀ ಪುರಸ್ಕೃತರಾಗಿರುವ ಹೆಬ್ಬಾಳದ ಸುಮಂಗಲಿ ಸೇವಾಶ್ರಮದ ಮುಖ್ಯಸ್ಥೆ ಡಾ.ಎಸ್.ಜಿ.ಸುಶೀಲಮ್ಮ ಅವರಿಗೆ ಗೌರವ ಸನ್ಮಾನ, ಪೌರಕಾರ್ಮಿಕರಿಗೆ ಸನ್ಮಾನ, ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ, ದಿವ್ಯಾಂಗರಿಗೆ ಗಾಲಿ ಕುರ್ಚಿಗಳ ವಿತರಣೆ, ಬೀದಿ ವ್ಯಾಪಾರಿಗಳಿಗೆ ಉಚಿತ ಛತ್ರಿ ವಿತರಣೆ, ಉಚಿತ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ ಹಾಗೂ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿದಂತೆ ಹಲವು ಸಮಾಜ ಸೇವಾ ಕಾರ್ಯಗಳ ಮೂಲಕ ಡಾ.ವೈ.ಎ.ನಾರಾಯಣಸ್ವಾಮಿ ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಯಿತು.
ಜನ್ಮದಿನಾಚರಣೆ ಪ್ರಯುಕ್ತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡ, ಚಿಕ್ಕಬಳ್ಳಾಪುರ ಸಂಸದರು, ಮಾಜಿ ಸಚಿವರಾದ ಡಾ.ಕೆ.ಸುಧಾಕರ್, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಹರೀಶ್, ಬೆಂಗಳೂರು ನಗರ ಬಿಜೆಪಿ ಪ್ರಭಾರಿ ಎಸ್.ಎನ್.ರಾಜಣ್ಣ, ಬಿಜೆಪಿ ಮುಖಂಡರಾದ ನಾರಾಯಣ ಸೇರಿದಂತೆ ಹಲವು ಬಿಜೆಪಿ ಮುಖಂಡರು, ಗಣ್ಯರು ಡಾ.ವೈ.ಎ.ನಾರಾಯಣಸ್ವಾಮಿ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ಈ ವೇಳೆ ಡಾ.ವೈ.ಎ. ನಾರಾಯಣಸ್ವಾಮಿ ಅವರು ಮಾತನಾಡಿ ‘ಸಮಾಜ ಸೇವಾ ಕಾರ್ಯಗಳ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂಬ ಹಂಬಲದೊಂದಿಗೆ ಕಳೆದ ಹಲವು ದಶಕಗಳಿಂದ ಸಮಾಜಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಲೇ ಬಂದಿದ್ದೇನೆ, ಈ ಬಾರಿಯ ಜನ್ಮದಿನಾಚರಣೆಯ ಮೂಲಕ ಇನ್ನೂ ಹೆಚ್ಚಿನ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಬೇಕು ಎಂಬ ಸಂಕಲ್ಪದೊಂದಿಗೆ ಹೆಬ್ಬಾಳ ಕ್ಷೇತ್ರದಲ್ಲಿ ಸಮಾಜ ಸೇವಾ ಕಾರ್ಯಗಳನ್ನು ಕೈಗೊಳ್ಳಲು ನಿರ್ಧರಿಸಿದ್ದು, ನನ್ನ ಸಮಾಜ ಸೇವ ಕಾರ್ಯಕ್ಕೆ ಸ್ನೇಹಿತರು, ಹಿತೈಷಿಗಳು, ಬಿಜೆಪಿ ಮುಖಂಡರು ಬೆಂಬಲವಾಗಿ ನಿಂತು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
