



‘ಶ್ರೀ ಸಾಗರ್ ಸಿಲ್ವರ್’ ನೂತನ ಮಳಿಗೆ ಉದ್ಘಾಟನೆ :
ಯಲಹಂಕ : ವಿದೇಶೀ ವಿನಿಮಯದ ಮೇಲೆ ಉಂಟಾಗುವ ದುಷ್ಪರಿಣಾಮ ಮತ್ತು ರೂಪಾಯಿ ಅಪಮೌಲ್ಯ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿರುವ ಸಲಹೆ ಸಮಯೋಚಿತವಾಗಿದ್ದು, ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿಯವರ ಸಲಹೆಯನ್ನು ಪಾಲಿಸುವುದು ಉತ್ತಮವಾದ ಬೆಳವಣಿಗೆ ಆಗಬಲ್ಲದು ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅವರು ಅಭಿಪ್ರಾಯ ಪಟ್ಟರು.
ಯಲಹಂಕ ಉಪನಗರದಲ್ಲಿ ‘ಶ್ರೀ ಸಾಗರ್ ಸಿಲ್ವರ್’ ನ ನೂತನ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು ‘ಪ್ರಸಕ್ತ ಸನ್ನಿವೇಶದಲ್ಲಿ ಚಿನ್ನದ ಮೇಲಿನ ಹೂಡಿಕೆ ಮತ್ತು ಪೆಟ್ರೋಲ್, ಡೀಸೆಲ್ ಬಳಕೆಯನ್ನು ಮಿತಗೊಳಿಸುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ. ಈ ಹಿಂದಿನ ಸರ್ಕಾರಗಳು ಸಹ ಯುದ್ಧ ಹಾಗೂ ಇನ್ನಿತರೆ ಸಂದಿಗ್ಧ ಪರಿಸ್ಥಿತಿಗಳಲ್ಲಿ ದೇಶದ ಹಿತದೃಷ್ಟಿಯಿಂದ ಚಿನ್ನದ ಮೇಲಿನ ಹೂಡಿಕೆ ಮತ್ತು ಪೆಟ್ರೋಲ್, ಡೀಸೆಲ್ ಬಳಕೆಯನ್ನು ಮಿತಗೊಳುಸುವ ಸಲಹೆಗಳನ್ನು ನೀಡಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರಿಗೆ ಈ ಎಲ್ಲದರ ಅರಿವಿದ್ದೂ ಸಹ ಟೀಕೆ ಮಾಡಲೇಬೇಕು ಎಂಬ ಮನಸ್ಥಿತಿ ಹೊಂದಿರುವುದು ದುರ್ದೈವದ ಸಂಗತಿ. ನಮ್ಮ ದೇಶದಲ್ಲಿ ಚಿನ್ನದ ಮೇಲಿನ ವ್ಯಾಮೋಹದಿಂದಾಗಿ ಚಿನ್ನದ ಗಟ್ಟಿ ಖರೀದಿಸಿ ಇಟ್ಟುಕೊಳ್ಳುವಂತಹ ಮನಸ್ಥಿತಿ ಹೊಂದಿರುವ ಜನರಿದ್ದಾರೆ, ಚಿನ್ನದ ಮೇಲಿನ ಹೂಡಿಕೆ ಒಂದು ನಿಷ್ಕ್ರಿಯ ಹೂಡಿಕೆಯಾಗಿದ್ದು, ಇದರಿಂದ ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಚಿನ್ನ ಮತ್ತು ಪೆಟ್ರೋಲ್, ಡೀಸೆಲ್ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳಾಗಿರುವುದರಿಂದ ಡಾಲರ್ ಮೇಲಿನ ಅವಲಂಬನೆ ಹೆಚ್ಚುವುದರ ಜೊತೆಗೆ ನಮ್ಮ ರೂಪಾಯಿಯ ಅಪಮೌಲ್ಯ ಹೆಚ್ಚುತ್ತದೆ ಇದರಿಂದಾಗಿ ನಮ್ಮ ದೇಶಕ್ಕೆ ನಷ್ಟ, ವಿದೇಶಗಳಿಗೆ ಲಾಭವಾಗುವ ಪ್ರಸಂಗವೇ ಹೆಚ್ಚು ಈ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಲಹೆ ಅತ್ಯಂತ ಉಚಿತವಾಗಿದೆ ಎಂದು ಮೋದಿಯವರ ಸಲಹೆಯನ್ನು ಸಮರ್ಥಿಸಿಕೊಂಡರು.
ಇದೇ ಸಂದರ್ಭದಲ್ಲಿ ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಮುನಿರಾಜು, ಪ್ರಧಾನ ಕಾರ್ಯದರ್ಶಿ ವಿ.ಪವನ್ ಕುಮಾರ್, ಯಲಹಂಕ ವರ್ತಕರ ಸಂಘದ ಅಧ್ಯಕ್ಷ ಸುಬ್ಬಣ್ಣ, ಪ್ರಧಾನ ಕಾರ್ಯದರ್ಶಿ ಗೋಪಾಲ್ ಪಟೇಲ್, ಶ್ರೀ ಸಾಗರ್ ಸಿಲ್ವರ್ ಮಳಿಗೆಯ ಮಾಲೀಕರಾದ ಶಿವಲಾಲ್, ಮದನ್ ಲಾಲ್, ಬಿಜೆಪಿ ಮುಖಂಡರಾದ ಮಧುಸೂದನ್, ಟಿ.ಎಲ್.ಪ್ರೇಮ್ ಕುಮಾರ್ ಸೇರಿದಂತೆ ಇನ್ನಿತರರಿದ್ದರು.
