








ಹಣ್ಣಿನ ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಣೆ :
ಯಲಹಂಕ : ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ‘ಜಲಸಿರಿ ಪ್ರತಿಷ್ಠಾನ’ದ ವತಿಯಿಂದ ಯಲಹಂಕ ಕೆರೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಅವರು ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಿದರು.
ಬೆಳಿಗ್ಗೆ 6 ಗಂಟೆಗೆ ಕೆರೆಯ ಆವರಣದಲ್ಲಿ ಶಾಸಕರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪರಿಸರ ಜಾಗೃತಿ ನಡಿಗೆಯ ಮೂಲಕ ಅರಿವು ಮೂಡಿಸಿದರು. ನಂತರ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನೀಡಲಾಯಿತು. ಇದೇ ವೇಳೆ ಕೆರೆ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಇ-ಟಾಯ್ಲೆಟ್ ಅನ್ನು ಶಾಸಕರು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ಪರಿಸರ ದಿನಾಚರಣೆ ಎಂಬುದು ಕೇವಲ ಒಂದು ದಿನದ ಉತ್ಸವ ವಾಗಬಾರದು ಅದು ನಿತ್ಯೋತ್ಸವವಾಗಬೇಕು. ಪರಿಸರ ಸಕಲ ಜೀವರಾಶಿಗಳಿಗೂ ಅಗತ್ಯವಿರುವ ಮಹತ್ವಪೂರ್ಣವಾದ ವಿಷಯವಾಗಿದ್ದು, ಮನುಷ್ಯನ ಬದುಕು ಪರಿಸರದ ಮೇಲೆ ಅವಲಂಬಿತವಾಗಿದೆ ಇದನ್ನು ಮನಗಂಡು ಪ್ರತಿ ವ್ಯಕ್ತಿ ಪ್ರತಿ ಕ್ಷಣದಲ್ಲೂ ಪರಿಸರ ಸಂರಕ್ಷಣೆಯ ಚಿಂತನೆಯನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಜಲಸಿರಿ ಪ್ರತಿಷ್ಠಾನದ ಅಧ್ಯಕ್ಷ ಮು.ಕೃಷ್ಣಮೂರ್ತಿ, ಬಿಜೆಪಿ ಮುಖಂಡರಾದ ವಿ.ವಿ.ರಾಮಮೂರ್ತಿ, ಮಧುಸೂದನ್, ಚೊಕ್ಕನಹಳ್ಳಿ ವೆಂಕಟೇಶ್, ಮುನಿರಾಜು, ದಾಮೋದರ್, ಯಲಹಂಕ ಜಯಣ್ಣ, ವೇಣುಗೋಪಾಲ್, ಶೇಷಾದ್ರಿ, ಶಿವಕುಮಾರ್, ಆಟೋ ಶಿವು ಸೇರಿದಂತೆ ಇನ್ನಿತರದಿದ್ದರು.
