ಜಕ್ಕೂರು ರೈಲ್ವೆ ಮೇಲ್ಸೇತುವೆ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್ :
ಬ್ಯಾಟರಾಯನಪುರ : 15 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ 26.16 ಕೋಟಿ ವೆಚ್ಚದ ಜಕ್ಕೂರು ರೈಲ್ವೆ ಮೇಲ್ಸೇತುವೆಯನ್ನು ಸಿಎಂ ಡಿ.ಕೆ. ಶಿವಕುಮಾರ್ ಅವರು ಬುಧವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ‘ಇದೊಂದು ಕ್ಲಿಷ್ಟಕರವಾದ ಕೆಲಸವಾಗಿತ್ತು, ಭೂಸಾಧೀನ ಪ್ರಕ್ರಿಯೆಯ ಸವಾಲು ಒಂದೆಡೆಯಾದರೆ, ಇನ್ನೊಂದೆಡೆ. ರೈಲ್ವೆ ಇಲಾಖೆ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ನಡುವಿನ ಹಗ್ಗ ಜಗ್ಗಾಟ, ಇಂತಹ ಕ್ಲಿಷ್ಟಕರವಾದ ಪರಿಸ್ಥಿತಿಯನ್ನು ಪರಿಹರಿಸಿಕೊಂಡು ಮುಂದೆ ಸಾಗುವಲ್ಲಿ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ವಿಳಂಬವಾದರೂ ಅತ್ಯುತ್ತಮವಾದ ಮೇಲ್ಸೇತುವೆ ನಿರ್ಮಾಣಗೊಂಡು ಇಂದು ಲೋಕಾರ್ಪಣೆಯಾಗಿದೆ. ಸುಮಾರು 443 ಮೀಟರ್ ಉದ್ದದ ಚತುಷ್ಪಥಗಳ, ದ್ವಿಮುಖ ಸಂಚಾರ ವ್ಯವಸ್ಥೆಯ ಈ ಮೇಲ್ಸೇತುವೆಯಿಂದ ವಾಹನ ಸವಾರರು ರೈಲ್ವೆ ಕ್ರಾಸಿಂಗ್ ನ್ನು ತಪ್ಪಿಸಿ ಥಣಿಸಂದ್ರ, ಹೆಬ್ಬಾಳ, ಕೊಗಿಲು, ಯಲಹಂಕ ಮತ್ತು ವಿಮಾನ ನಿಲ್ದಾಣ ರಸ್ತೆ ಕಡೆಗೆ ಸಂಚರಿಸಬಹುದಾಗಿದ್ದು, 15 ನಿಮಿಷಗಳ ಸಮಯ ಉಳಿತಾಯವಾಗಲಿದೆ ಎಂದರು. ಅಭಿವೃದ್ಧಿಯ ಭಾಗವಾಗಿ ರಾಜ್ಯ ಸರ್ಕಾರ ವಿವಿಧ ಕಾಮಗಾರಿ ಗಳನ್ನು ಕೈಗೊಳ್ಳಲು ಶ್ರಮಿಸುತ್ತಿದ್ದು, ಜಿಕೆವಿಕೆ ಪಕ್ಕದಲ್ಲಿ ಬೆಂಗಳೂರು ಉತ್ತರ ಪಾಲಿಕೆ ಕಚೇರಿಗೆ ಸ್ಥಳ ನಿಗದಿ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ದೆಸೆಯಲ್ಲಿ ಭೂ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದು ಸರ್ಕಾರದ ಆರನೇ ಗ್ಯಾರಂಟಿ ಯೋಜನೆಯಾಗಿದೆ, ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳುವಂತಾಗಲಿ ಎಂದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಮಾತನಾಡಿ ‘ಭೂಸ್ವಾಧೀನ ಮತ್ತು ಸಮನ್ವಯದ ಸವಾಲುಗಳನ್ನು ಹಲವು ವರ್ಷಗಳ ಕಾಲ ಎದುರಿಸಿ, ನಿವಾರಿಸಿಕೊಂಡು, ಜಕ್ಕೂರು ರೈಲ್ವೆ ಮೇಲ್ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಇಂದು ಲೋಕಾರ್ಪಣೆ ಮಾಡಲಾಗಿದೆ. ಉತ್ತಮ ಸಂಪರ್ಕ ವ್ಯವಸ್ಥೆಯುಳ್ಳ ಉತ್ತಮ ಬೆಂಗಳೂರು ನಿರ್ಮಾಣದತ್ತ ಇದು ಮತ್ತೊಂದು ಹೊಸ ಹೆಜ್ಜೆಯಾಗಿದೆ. ಯೋಜನೆಯ ಒಟ್ಟು ವೆಚ್ಚ 69.66 ಕೋಟಿ ರೂ.ಗಳಾಗಿದೆ. ಇದರಲ್ಲಿ ಮೇಲ್ಸೇತುವೆ ನಿರ್ಮಾಣ ವೆಚ್ಚ 26.16 ಕೋಟಿ ರೂಗಳಾಗಿದ್ದು, ಈ ಪೈಕಿ ನೈರುತ್ಯ ರೈಲ್ವೆ 6.37 ಕೋಟಿ ರು ಮತ್ತು ಬಿಬಿಎಂಪಿ 19.79 ಕೋಟಿ ರೂ ಗಳನ್ನು ಭರಿಸಿವೆ. ಉಳಿದಂತೆ ಭೂಸ್ವಾಧೀನ ವೆಚ್ಚ 43.50 ಕೋಟಿ ರೂ. ಗಳ ಒಟ್ಟು ಹಣವನ್ನು ಸಂಪೂರ್ಣವಾಗಿ ಬಿಬಿಎಂಪಿ ಭರಿಸಿದೆ. ಈ ಮೇಲ್ಸೇತುವೆ ನಿರ್ಮಾಣದ ಭೂಸ್ವಾಧೀನ ಪ್ರಕ್ರಿಯೆಗೆ ಬಡವರು ಅಗತ್ಯ ರೀತಿಯಲ್ಲಿ ಸ್ಪಂದಿಸಿದ್ದಾರೆ, ಆದರೆ ಕೆಲ ಶ್ರೀಮಂತರು ಹಾಗೂ ಜಮೀನ್ದಾರರು ಭೂಸ್ವಾಧೀನ ಪ್ರಕ್ರಿಯೆಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದರು, ಎಲ್ಲಾ ತೊಡಕುಗಳನ್ನು ಪರಿಹರಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಸ್ವಲ್ಪ ವಿಳಂಬವಾಯಿತು ಎಂದು ಕಾಮಗಾರಿ ವಿಳಂಬಕ್ಕೆ ಕಾರಣವೇನು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ, ದೊಡ್ಡಬಳ್ಳಾಪುರ ಮಾಜಿ ಶಾಸಕ ವೆಂಕಟರಮಣಯ್ಯ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಾನೇಗೌಡ, ಸದಸ್ಯರಾದ ಎನ್ ಕೆ ಮಹೇಶ್ ಕುಮಾರ್, ಜೈಕುಮಾರ್, ಅಮೀರ್ ಜಾನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಅಶೋಕನ್, ಜಕ್ಕೂರು ರವಿಕುಮಾರ್, ಬೆಂಗಳೂರು ಉತ್ತರ ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರರಾದ ಸುಧಾಕರ್ ರೆಡ್ಡಿ, ನಾಗಪ್ಪ, ಎಇಇ ಗಳಾದ ವರುಣ್, ರಾಮಸಂಜೀವಯ್ಯ, ಸ್ವಪ್ನ, ಪರಿಚಿತ ಕನ್ಸ್ಟ್ರಕ್ಷನ್ ನ ಮುಖ್ಯಸ್ಥರಾದ ಎನ್.ಶ್ರೀನಿವಾಸಮುರ್ತಿ, ನಿಶಾಂತ್ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಕಾಂಗ್ರೆಸ್ ಮುಖಂಡರಿದ್ದರು.

Leave a Reply

Your email address will not be published. Required fields are marked *