.

ಬ್ರಹ್ಮಕುಮಾರೀಸ್ ಕಲಾ ಸಂಸ್ಕೃತಿ ವಿಭಾಗದಿಂದ ಕಲಾಕಾರ-ಸ್ವರ್ಣಿಮ ಭಾರತದ ರಚನಾಕಾರ ಕಾರ್ಯಕ್ರಮ :

ಯಲಹಂಕ : ಪಾಶ್ಚಾತ್ಯ ಶಿಕ್ಷಣ ಸಂಸ್ಕೃತಿ ಜೀವನಶೈಲಿ ಮುಕ್ತ ಜೀವನವೇ ನಿಜವಾದ ಸ್ವಾತಂತ್ರ್ಯದ ಅರ್ಥ ಎಂದು ನಾಡೋಜ ವುಡೆ ಪಿ ಕೃಷ್ಣ ಅಭಿಪ್ರಾಯಪಟ್ಟರು.

50ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯಲಹಂಕ ಉಪನಗರದ ಬ್ರಹ್ಮಕುಮಾರಿ ಆಶ್ರಮದ ಕಲಾ ಮತ್ತು ಸಂಸ್ಕೃತಿ ವಿಭಾಗದ ವತಿಯಿಂದ ಇಲ್ಲಿನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ‘ಕಲಾಕಾರ-ಸ್ವರ್ಣಿಮ ಭಾರತದ ರಚನಾಕಾರ’ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರಕ್ಕೇರದ ಮೂರಕ್ಕಿಳಿಯದ ಸ್ಥಿತಪ್ರಜ್ಞತೆ, ಸಮಸ್ಥಿತಿಯ ಮನಸ್ಸು ಪ್ರಸ್ತುತ ವಾಗಿ ನಮಗೆ ಅಗತ್ಯವಿರುವ ಅಂಶವಾಗಿದ್ದು, ನಮ್ಮ ಕಲೆ, ಸಂಸ್ಕೃತಿ ಇದನ್ನು ನಮಗೆ ಸಮರ್ಥ ವಾಗಿ ತಿಳಿಸಿ ಕೊಡುತ್ತದೆ ಆದರೆ ಅದನ್ನು ಅನುಸರಿಸುವ ತಾಳ್ಮೆಯ ಗುಣ ನಮ್ಮಲ್ಲಿರಬೇಕು. ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಆಧ್ಯಾತ್ಮಿಕ ಕ್ಷೇತ್ರದ ಜತೆಗೆ ನಮ್ಮ ಮಣ್ಣಿನ ಕಲೆ, ಸಂಸ್ಕೃತಿ, ಪರಂಪರೆಯ ಉಳಿವಿಗೆ ಪೂರಕವಾದ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಪ್ರಶಂಸನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕುಮಾರಿ ಆಶ್ರಮದ ನಗರದ ಕುಮಾರಪಾರ್ಕ್ ಉಪವಲಯದ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬಿ.ಕೆ. ಸರೋಜ ಮಾತನಾಡಿ ‘ನಮ್ಮ ಸಂಸ್ಕೃತಿ, ಪರಂಪರೆಗೆ ಸಹಸ್ರಾರು ವರ್ಷಗಳ ಪುರಾತನ ಐತಿಹ್ಯವಿದೆ, ಆತ್ಮೀಯ ಸಂಬಂಧ, ಪರಸ್ಪರ ಗೌರವ, ಪ್ರೀತಿ, ವಿಶ್ವಾಸದ ಸಮೃದ್ಧ ತಳಹದಿಯಿದೆ ಇಂತಹ ಶ್ರೀಮಂತ ಸಂಸ್ಕೃತಿ ಯನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿ, ವೇಶಭೂಷಣ, ಆಹಾರ ಕ್ರಮವನ್ನು ಅನುಸಲು ನಮ್ಮ ಯುವ ಪೀಳಿಗೆ ಮುಂದಾಗುತ್ತಿರುವ ಬಗ್ಗೆ ವಿಷಾದವಿದೆ. ಪಾಶ್ಚಾತ್ಯ ದೇಶಗಳೇ ನಮ್ಮ ಯೋಗ, ಭರತನಾಟ್ಯ, ಆಹಾರ ಕ್ರಮ ಮುಂತಾದ ನಮ್ಮ ಸಂಸ್ಕೃತಿಯ ಅವಿಚ್ಛಿನ್ನ ಪರಂಪರೆ ಯನ್ನು ಅನುಕರಿಸುತ್ತಿ ರುವಾಗ ನಮ್ಮ ಯುವ ಸಮುದಾಯಕ್ಕೆ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹವೇಕೆ ಅರ್ಥವಾಗುತ್ತಿಲ್ಲ, ನಮ್ಮ ಆಹಾರ,ಉಡುಗೆ-ತೊಡುಗೆ, ಸಂಸ್ಕೃತಿ, ಜೀವನ ಕ್ರಮ ಎಲ್ಲವೂ ಸಹ ಅಸಂಖ್ಯಾತ ವರ್ಷಗಳ ಪ್ರಾಯೋಗಿಕ ಅನುಭವದಿಂದ ಅಳವಡಿಸಿಕೊಂಡಿರುವುದಾಗಿದ್ದು, ಇದಕ್ಕಿಂತ ಪರಿಪೂರ್ಣವಾದ ಜೀವನ ಕ್ರಮ ಜಗತ್ತಿನ ಬೇರೆಲ್ಲೂ ಇಲ್ಲ, ಇದನ್ನು ನಾವು ಮನಗಾಣ ಬೇಕಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ನಾಡಿನ ಸಂಸ್ಕೃತಿಯ ಕಲಾ ಪ್ರಕಾರಗಳಾದ ಯಕ್ಷಗಾನ, ಭರತನಾಟ್ಯ, ಕಥಕ್ ನೃತ್ಯ, ಲಾವಣಿ, ತತ್ವ ಪದಗಳು, ಚಿತ್ರಕಲೆ, ಭಕ್ತಿ ಗೀತೆಗಳ ಗಾಯನ, ಹಾಸ್ಯ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಸೇವಾಶ್ರಮದ ದಾವಣಗೆರೆ ಸಮೂಹ ಕೇಂದ್ರದ ಸಂಚಾಲಕ ರಾದ ರಾಜಯೋಗಿನಿ ಬಿ.ಕೆ.ಲೀಲಾ, ಯಲಹಂಕ ಸಮೂಹ ಕೇಂದ್ರದ ಸಂಚಾಲಕರಾದ ಬಿ.ಕೆ.ವಿಜಯ ಲಕ್ಷ್ಮಿ, ನಟ, ನಿರ್ಮಾಪಕ ಜಿ ಎನ್ ರಾಜಶೇಖರ ನಾಯ್ಡು, ಸಂಗೀತ ನಿರ್ದೇಶಕ ಬಲರಾಮ, ನಟಿ ಆರತಿ ನಾಯರ್, ಗಾಯಕಿ ಡಾ.ಹೇಮ ಪ್ರಸಾದ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *