- ಪಬ್ಲಿಕ್ ಪವರ್. R ಹನುಮಂತು. 9845085793
- 7349337989
- ಕೀರ್ತನೆಗಳ ಮೂಲಕ ಸಾಮಾಜಿಕ ಸಂದೇಶ ಸಾರಿದ ಮಹಾತ್ಮ ಕನಕದಾಸರು,*

ಜಾತಿ,ಮತ,ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಸಾಮಾನ್ಯ ಜನರಿಗೂ ಅರ್ಥವಾಗುವ ಭಾಷೆಯಲ್ಲಿ ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಸಂತರೆಂದರೆ ಅದು ಕನಕದಾಸರು. ಕನ್ನಡ ಸಾಹಿತ್ಯ ಕಂಡ ಒಬ್ಬ ಮಹಾನ್ ಚಿಂತಕ, ಕನ್ನಡ ಭಾಷೆಯ ಸುಪ್ರಸಿದ್ಧ ಸಂತ, ತತ್ವಜ್ಞಾನಿ, ಕವಿ – ಸಂಗೀತಗಾರ, ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೀರ್ತನೆಗಳ ಮೂಲಕ ಅನಘ್ರ್ಯ ಕೊಡುಗೆಯನ್ನು ನೀಡಿದವರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಒಬ್ಬರೇ ಶೂದ್ರ ದಾಸರು, ಜೊತೆಗೆ ಸಮಾಜದಲ್ಲಿ ಮೇಲು- ಕೀಳು, ಶ್ರೇಷ್ಠ-ಕನಿಷ್ಠ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದ ಒಬ್ಬ ಮಹಾನ್ ಚಿಂತಕ ಕನಕದಾಸರು. ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 1509 ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ – ಬೀರ ಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು, ಬೀರಪ್ಪ ನಾಯಕ ವಿಜಯನಗರ ಸಾಮ್ರಾಜ್ಯದ ಬಂಕಾಪುರ ಪ್ರಾಂತ್ಯದ ಸೇನಾ ದಳಪತಿಯಾಗಿದ್ದರು, ಬೀರಪ್ಪನಾಯಕ ಮತ್ತು ಬಚ್ಚಮ್ಮ ತಿರುಪತಿ ತಿಮ್ಮಪ್ಪನಲ್ಲಿ ಅಪಾರವಾದ ಭಕ್ತಿಯನ್ನು ಹೊಂದಿದ್ದವರು, ದಂಪತಿಗಳಿಬ್ಬರಿಗೂ ಒಂದು ಮಹಾನ್ ಅಪಾರವಾದ ಬಯಕೆಯಿತ್ತು ಅದೇನೆಂದರೆ ತಮಗೆ ಒಬ್ಬ ಕುಲದೀಪಕನಾದ ಗಂಡು ಮಗು ಜನಿಸಬೇಕು ಎಂಬುದಾಗಿತ್ತು. ವಂಶೋದ್ಧಾರಕ ನಾದ ಒಬ್ಬ ಮಗನನ್ನು ಕರುಣಿಸು ಎಂದು ದಂಪತಿಗಳಿಬ್ಬರು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು ಕೊನೆಗೂ ಆಸೆ ಫಲಿಸಿತು,
ಬೀರಪ್ಪ ಮತ್ತು ಬಚ್ಚಮ್ಮ ನಿಗೆ ಒಬ್ಬ ಮಗ ಜನಿಸಿದ, ತಂದೆ-ತಾಯಿಗಳಿಗೆ ಆನಂದವೂ -ಆನಂದ. ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ಹುಟ್ಟಿದ ತಮ್ಮ ಮಗನಿಗೆ ತಿಮ್ಮಪ್ಪ ಎಂದೇ ನಾಮಕರಣ ಮಾಡಿದರು, ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೇ, ಬಂಕಾಪುರದ ಶ್ರೀನಿವಾಸಾಚಾರ್ಯರ ಬಳಿ ಅಕ್ಷರಾಭ್ಯಾಸವಾಯಿತು, ವ್ಯಾಕರಣ, ತರ್ಕ, ವಿಮಾಂಸೆ, ಸಾಹಿತಿಗಳಲ್ಲಿ ಪರಿಣಿತನಾದ ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನು ಕಲಿತ, ಕೆಲವು ವರ್ಷಗಳಲ್ಲಿ ತಂದೆ-ತಾಯಿ ಇಬ್ಬರೂ ತೀರಿಕೊಂಡರು.
ಅಪಾರ ಪಾಂಡಿತ್ಯವನ್ನು ಪಡೆದಿದ್ದ ತಿಮ್ಮಪ್ಪನಾಯಕ ತಂದೆಯ ಬಳಿಕ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತ್ಯಕ್ಕೆ ಸೇನಾಧಿಪತಿಯಾದ, ಅತ್ಯಂತ ದಕ್ಷತೆ, ಪ್ರಾಮಾಣಿಕತೆಯಿಂದ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಯಶಸ್ವಿ ನಾಯಕನಾದ ಎಲ್ಲರ ಮೆಚ್ಚುಗೆಗೆ ಪಾತ್ರನಾದ, ತಿಮ್ಮಪ್ಪನಾಯಕ ಸೇನಾಧಿಪತಿಯಾಗಿದ್ದ ಪ್ರಾಂತ್ಯದಲ್ಲಿ ಸಾಕಷ್ಟು ವಜ್ರ -ವೈಡೂರ್ಯಗಳು ಸಿಕ್ಕರೂ ಸಹ ತಾನು ಅದನ್ನು ವಿಜಯನಗರ ಅರಸರಿಗೆ ಒಪ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ನಿದರ್ಶನವು ಉಂಟು,
ಅಂದಿನ ಕಾಲದಲ್ಲಿ ಬಂಗಾರಕ್ಕೆ ಕನಕ ಎಂಬುದಾಗಿ ಕರೆಯುವುದುಂಟು ಹಾಗಾಗಿಯೇ ತಿಮ್ಮಪ್ಪನಾಯಕ ಕನಕ, ಕನಕನಾಯಕ ಎಂಬುದಾಗಿ ಎಲ್ಲರೂ ಸಂಭೋದಿಸಿದ್ದರು. ಹೀಗೆ ಯುದ್ಧಗಳು ನಡೆಯುತ್ತಿದ್ದಂತಹ ಸಂದರ್ಭದಲ್ಲಿ ತಿಮ್ಮಪ್ಪನಾಯಕ ಒಂದು ಯುದ್ಧದಲ್ಲಿ ಸೋಲನ್ನ ಅನುಭವಿಸಬೇಕಾಗುತ್ತದೆ ಆಗ ತಾನು ತನ್ನ ಅಧಿಕಾರವನ್ನು ತ್ಯಜಿಸಿ ಜೀವನದಲ್ಲಿ ವೈರಾಗ್ಯ ಉಂಟಾಗಿ, ವ್ಯಾಸರಾಯರಿಂದ ದೀಕ್ಷೆಯನ್ನುಪಡೆದು ಅಂದಿನಿಂದ ತಿಮ್ಮಪ್ಪನಾಯಕ ದಾಸರಾದರು, ಆದ್ದರಿಂದ ಅವರಿಗೆ ಕನಕದಾಸರು ಎಂಬ ಹೆಸರು ಬಂದಿತು ಎನ್ನಲಾಗಿದೆ.
ಕರ್ನಾಟಕದಲ್ಲಿ 15 ಮತ್ತು 16ನೇ ಶತಮಾನದಲ್ಲಿ ಜನಪ್ರಿಯವಾದ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರು ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯದ ವಿರುದ್ದ ಹೋರಾಟ ನಡೆಸಿದವರು ಪುರಂದರದಾಸರ ಸಮಕಾಲೀನವರು. ಕನ್ನಡ ಸಾಹಿತ್ಯಕ್ಕೆ ಇವರುಗಳು ನೀಡಿರುವ ಸೇವೆಯನ್ನು ಪರಿಗಣಿಸಿ ಇವರಿಬ್ಬರನ್ನು ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಸುಳಾಟ, ಉಗಾ -ಭೋಗಗಳು ಹಾಗೂ ಮುಂಡಿಗೆಗಳ ರೂಪದಲ್ಲಿ ಸುಮಾರು 316 ಕೀರ್ತನೆಗಳನ್ನು ರಚಿಸಿ ಕರ್ನಾಟಕದ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿ ಕನಕದಾಸರು ವಿಶ್ವಮಾನವರಾಗಿದ್ದಾರೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ!, ಬಲ್ಲಿರಾ. ಜಪವ ಮಾಡಿದರೇನು? ತಪವ ಮಾಡಿದರೇನು? ವಿಪರೀತ ಕಪಟ ಗುಣ ಕಲುಷವಿದ್ದವರು . ಹೀಗೆ ತಮ್ಮ ನೂರಾರು ಕೀರ್ತನೆಗಳ ಮೂಲಕ ಆನೇಕ ರೀತಿಯ ಸಾಮಾಜಿಕ ಸಂದೇಶವನ್ನು ಸಾರಿದ್ದಾರೆ. ಕನಕದಾಸರು ಉಡುಪಿಯ ಶ್ರೀ ಕೃಷ್ಣನ ಪರಮಭಕ್ತರು ಒಮ್ಮೆ ಉಡುಪಿಯ ಶ್ರೀ ಕೃಷ್ಣನ ದರ್ಶನಕ್ಕೆಂದು ಹೋದಾಗ ಶೂದ್ರ ಎಂಬ ಕಾರಣಕ್ಕೆ ದೇವಾಲಯದ ಒಳಗೆ ಪ್ರವೇಶ ದೊರೆಯುವುದಿಲ್ಲ, ಆಗ ಕನಕದಾಸರು ಭಕ್ತಿಪರವಶರಾಗಿ ನಾನು ಹೇಗಾದರೂ ಮಾಡಿ ಕೃಷ್ಣಪರಮಾತ್ಮನ ದರ್ಶನ ಮಾಡಿಯೇ ತೀರುತ್ತೇನೆ ಎಂಬುದಾಗಿ ನಿಶ್ಚಯಿಸಿ ದೇವಾಲಯದ ಹಿಂಭಾಗಕ್ಕೆ ಹೋಗಿ ಭಕ್ತಿಯಿಂದ ಪರಮಾತ್ಮನ ನಮಿಸುತ್ತಾ ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ ಎಂದು ಹಾಡಿ ಶ್ರೀಕೃಷ್ಣನ ಮೂರ್ತಿಯನ್ನು ತನ್ನೆಡೆಗೆ ತಿರುಗುವಂತೆ ಮಾಡಿದ ಭಕ್ತ ಶ್ರೇಷ್ಠ ಕನಕದಾಸರು. ಅಂದಿನಿಂದ ಕನಕನ ಕಿಂಡಿಯ ಮೂಲಕ ಉಡುಪಿಯಲ್ಲಿ ಇಂದಿಗೂ ಸಹ ಶ್ರೀಕೃಷ್ಣನ ದರ್ಶನ ಮಾಡಬಹುದಾಗಿದೆ. ಕನಕದಾಸರ ಕೀರ್ತನೆಗಳನ್ನಲ್ಲದೆ ಅನೇಕ ಕಾವ್ಯಗಳನ್ನು ರಚಿಸಿದ್ದಾರೆ ಅವುಗಳಲ್ಲಿ ಪ್ರಮುಖವೆಂದರೆ ಮೋಹನ ತರಂಗಿಣಿ, ಹರಿಭಕ್ತಿ ಸಾರ, ನಳ -ಚರಿತ್ರೆ, ರಾಮಧ್ಯಾನ ಚರಿತೆ. ಮೋಹನ ತರಂಗಿಣಿಯಲ್ಲಿ ಕೃಷ್ಣ ಚರಿತ್ರೆಯನ್ನು ಹೇಳುತ್ತಾ ತಮ್ಮ ರಾಜನಾದ ಕೃಷ್ಣದೇವರಾಯನನ್ನು ಕೃಷ್ಣನಿಗೆ ಹೋಲಿಸುವ ಅದ್ಭುತವಾದ ಕಾವ್ಯ. ಕನ್ನಡದ ಭಗವದ್ಗೀತೆ ಎಂದು ಕರೆಯಲ್ಪಡುವ ಹರಿಭಕ್ತಿಸಾರ ಕವಿ ಸಹಜ ವರ್ಣನೆಗಳಿಂದಲೂ ಉಪಮೆಗಳು ಧೀಮಂತ ವಾಗಿದೆ, ನಳಚರಿತ್ರೆ ಇದು 13ನೇ ಶತಮಾನದ ಒಂದು ಮಹಾನ್ ಪ್ರೇಮಕಥೆ, ನಳ-ದಮಯಂತಿಯರ ಹಂಸದ ಮೂಲಕ ಕಳುಹಿಸುವ ಸಂದೇಶಗಳನ್ನು ಒಳಗೊಂಡ ಕಥೆಯು ಇಂದಿಗೂ ಜನಪ್ರಿಯ. ರಾಮಧಾನ್ಯಚರಿತೆ ಇದು ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿ, ಮೇಲ್ವರ್ಗ ಹಾಗೂ ಕೆಳವರ್ಗದವರ ಆಹಾರಧಾನ್ಯ (ಅಕ್ಕಿ ಮತ್ತು ರಾಗಿ) ನಡುವಣ ವಿಧಾನ. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ ಎಂಬ ಕಾವ್ಯ ಭಾವಾರ್ಥ ಇಂದಿಗೂ ಯುವಕರ ಮನಮಿಡಿಯುವ ನಿಲುವನ್ನು ಅವರ ಗುರಿಯನ್ನು, ಅವರನ್ನು ಸರಿಯಾದ ದಾರಿಯಲ್ಲಿ ಒಯ್ಯುವಂತೆ ಮಾಡಿದ ನಮ್ಮ ಶ್ರೇಷ್ಠ ಸಂತ ಕವಿ ಕನಕದಾಸರು. ಜೈನ, ಮುಸಲ್ಮಾನ, ವೀರಶೈವ ಪ್ರಾಬಲ್ಯ ಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ಶ್ರಮಿಸಿದ ವ್ಯಾಸರಾಯರ ಶಿಷ್ಯರಾದ ತಿಮ್ಮಪ್ಪನಾಯಕ -ಕನಕ ದಾಸ ರಾಗಿ ಪರಿವರ್ತನೆಗೊಂಡು ತಮ್ಮ ಅನುಭಾವದಿಂದ ಹೊರಹೊಮ್ಮಿದ ಭಕ್ತಿಭಾವನೆಗಳನ್ನು, ತಾಯ್ನಾಡಿನಲ್ಲಿ ಕೀರ್ತನೆಗಳನ್ನು ರಚಿಸಿ ಲೋಕ ಪ್ರಸಿದ್ಧಿಯಾದ ಮಹಾತ್ಮ ನಮ್ಮ ಕನಕದಾಸರು. ಕೊನೆಯದಾಗಿ ಕನಕದಾಸರು ಹೇಳಿದ ಒಂದು ಮಾತನ್ನ ನಾವು ಸ್ಮರಿಸಬೇಕಾಗುತ್ತದೆ ” ಎಲ್ಲರೂ ನಿನಗೆ ಹಿತವರು ಎಂದು ನಂಬಬೇಡ ಮನವೇ, ಆಪತ್ತು ಬಂದೊಡನೆ ಯಾರು ಯಾರಿಗೂ ಇಲ್ಲ, ಭಕ್ತ ಪ್ರಹ್ಲಾದ ನಿಗೆ ಬಂದ ಸ್ಥಿತಿ ನೋಡಿ ತಂದೆ ಹಿತವನು ಎಂದು ನಂಬಬಹುದೇ?, ಹಡೆದ ಮಗುವನ್ನ ನೀರಲ್ಲಿ ತೇಲಿ ಬಿಟ್ಟ ಕುಂತಿಯನ್ನು ನೋಡಿ ತಾಯಿ ಹಿತವಳು ಎಂದು ನಂಬಬಹುದೇ?, ತಂದೆಯನ್ನೇ ಸೆರೆಯಲ್ಲಿಟ್ಟ ಕಂಸನನ್ನು ನೋಡಿ ಮಗ ಹಿತವನು ಎಂದು ನಂಬಬಹುದೇ?, ವಾಲಿಯನ್ನು ಕೊಲ್ಲಿಸಿದ ಅನುಜನನ್ನು ನೋಡಿ ಸೋದರ ಹಿತವನು ಎಂದು ನಂಬಬಹುದೇ?, ಆಪತ್ತು ಬಂದು ಒದಗಿದಾಗ ಯಾರಿಗೆ ಯಾರು ಇಲ್ಲ. ಎಂಬ ಸತ್ಯವನ್ನು ಸಮಾಜಕ್ಕೆ ಸಾರಿದ ಮಹಾನ್ ಚಿಂತಕ,
ಅಂತಹ ಮಹಾತ್ಮರ ಜಯಂತೋತ್ಸವ ವನ್ನು ಇಂದು ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ, ಮತ್ತೊಮ್ಮೆ ಸಮಸ್ತ ಕನ್ನಡಿಗರೆಲ್ಲರಿಗೂ ಕನಕ ಜಯಂತಿಯ ಶುಭಾಶಯಗಳು. ಇಂತಿ ಸಿದ್ದನಕೊಪ್ಪಲು ಕುಮಾರ್ , ವಕೀಲರು. ಮೈಸೂರು 9008856567.