ಯಲಹಂಕ : ಯಲಹಂಕದ ಐತಿಹಾಸಿಕ ಮಹೇಶ್ವರಮ್ಮ ದೇವಿ ಕರಗ ಬುಧವಾರ ತಡರಾತ್ರಿ ವಿಜೃಂಭಣೆಯಿಂದ ನೆರವೇರಿತು.

ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ನಿರಂತರವಾಗಿ ನಡೆದುಕೊಂಡು ‌ಬಂದಿರುವ ಯಲಹಂಕದ ಮಹೇಶ್ವರಮ್ಮ ದೇವಿ ಕರಗಕ್ಕೆ ಅನಾದಿ ಕಾಲದ ಐತಿಹ್ಯವಿದ್ದು, ಯಲಹಂಕ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಯಲಹಂಕದ ಕೆಂಪೇಗೌಡ ವಾರ್ಡ್ ವ್ಯಾಪ್ತಿಯಲ್ಲಿರುವ ಮಹೇಶ್ವರಮ್ಮ ದೇವಸ್ಥಾನದಲ್ಲಿ ಬುಧವಾರ ತಡ ರಾತ್ರಿ ನಡೆದ ಕರಗಕ್ಕೆ ಸಾವಿರಾರು ‌ಜನ ಸಾಕ್ಷಿಯಾದರು. ಕರಗದ ಪ್ರಯುಕ್ತ ಯಲಹಂಕ ಹಳೇನಗರ ವನ್ನು ತಳಿರು ತೋರಣ, ಜಗಮಗಿ ಸುವ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.

ಮಹೇಶ್ವರಮ್ಮ ದೇವಿ ದವಸ್ಥಾನದ ಬಳಿಯಿಂದ ಹೊರಟ ಕರಗದ ಮೆರವಣಿಗೆ ಯಲಹಂಕದ ಹೊಸಬೀದಿ, ಕೋಟೇಬೀದಿ, ಗಾಂಧಿನಗರ ಪ್ರದೇಶಗಳಲ್ಲಿ ಸಾಗಿತು. ಪ್ರಮುಖ ಬೀದಿಗಳಲ್ಲಿ ತೆರಳಿದ ಕರಗದ ಮರವಣಿಗೆ‌ಯನ್ನು ಸಹಸ್ರಾರು ಜನ ಕಣ್ತುಂಬಿ ಕೊಂಡರು. ಮೆರವಣಿಗೆ ವೇಳೆ ವೀರಕುಮಾರರ ಗೋವಿಂದಾ ಗೋವಿಂದಾ ಘೋಷಣೆ ಮಾರ್ಧನಿ ಮೊಳಗಿಸಿತು.

ಕರಗ ಮಹೋತ್ಸವವನ್ನು ಕುರಿತು ಮಹೇಶ್ವರಮ್ಮ ದೇವಿ ಕರಗ ಸಮಿತಿಯ ಮುಖ್ಯಸ್ಥರು, ಕರ್ನಾಟಕ ರಾಜ್ಯ ವಹ್ನಿಕುಲ ಕ್ಷತ್ರಿಯ(ತಿಗಳರ) ಸಂಘದ ಅಧ್ಯಕ್ಷರಾದ ಮು.ಕೃಷ್ಣಮೂರ್ತಿ ಮಾತನಾಡಿ ‘ಯಲಹಂಕ ಮಹೇಶ್ವರಮ್ಮ ದೇವಿ ಕರಗಕ್ಕೆ 500ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಅಂದಿನಿಂದ ಇಂದಿನವರೆಗೂ ಅತ್ಯಂತ ಶ್ರದ್ಧಾಭಕ್ತಿ ಮತ್ತು ವಿಜೃಂಭಣೆಯಿಂದ ನೆರವೇರಿಸಿಕೊಂಡು ಬರಲಾಗುತ್ತಿದೆ. ಮಹೇಶ್ವರಮ್ಮ ದೇವಿ ಕರಗ ಮಹೋತ್ಸವ ಹದಿನೈದು ದಿನಗಳ ಕಾರ್ಯಕ್ರಮವಾಗಿದ್ದು ಮೊದಲ. ದಿನ ಧ್ವಜಾರೋಹಣ ಕಾರ್ಯಕ್ರಮ ದೊಂದಿಗೆ ಕರಗ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ಹನ್ನೊಂದನೇ ದಿನಕ್ಕೆ ಹಸಿ ಕರಗ ನೆರವೇರುತ್ತದೆ. ನಂತರ ಪೊಂಗಲ್ ಸೇವೆ, ದೀಪಾರತಿ ಸೇವೆ, ಕೊಂಡ ಆಯುವ ಕಾರ್ಯಕ್ರಮ ಹೀಗೆ ಪ್ರತಿದಿನ ಒಂದೊಂದು ದೈವ ಸೇವಾ ಕಾರ್ಯಗಳು ಜರುಗುತ್ತವೆ. ಹದಿನೈದನೇ ದಿನ ರಾತ್ರಿ 9 ಗಂಟೆಗೆ ಮಹೇಶ್ವರಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿಸಿ, ನಂತರ ಕಲ್ಯಾಣಿಗೆ ತೆರಳಿ, ಗಂಗಾಪೂಜೆ ನೆರವೇರಿಸಲಾಗುತ್ತದೆ. ಇದಾದ ಬಳಿಗೆ ಸುಮಾರು ಮಧ್ಯರಾತ್ರಿ ಹನ್ನೆರಡು ಗಂಟೆಯ ವೇಳೆಗೆ ಮಹೇಶ್ವರಮ್ಮ ದೇವಿಯ ಕರಗ ಆರಂಭವಾಗುತ್ತದೆ. ಕರಗದ ಮೆರವಣಿಗೆ ಮೊದಲೇ ನಿಶ್ಚಯಿಸಿದ ಮಾರ್ಗಸೂಚಿಯ ಪ್ರಕಾರ ಸಾಗುತ್ತದೆ, ಕರಗ ಸುಮಾರು 3 ಗಂಟೆಯ ವೇಳೆಗೆ ಮುಕ್ತಾಯ ವಾಗುತ್ತದೆ. ಕರಗದಲ್ಲಿ ಎಲ್ಲಾ ಜಾತಿ, ಜನಾಂಗದ ಜನತೆ ಭಕ್ತಿಯಿಂದ ಪಾಲ್ಗೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಕರಗದ ಬಗ್ಗೆ ಮಾಹಿತಿ ನೀಡಿದರು.

ಮಹೇಶ್ವರಮ್ಮ ದೇವಿಯ ಕರಗ ಮಹೋತ್ಸವದ ಈ ದೈವ ಕಾರ್ಯದಲ್ಲಿ ವಹ್ನಿಕುಲ ಕ್ಷತ್ರಿಯ ಸಮುದಾಯದ ಗಂಟೆ ಪೂಜಾರಿ ಮುನಯ್ಯ, ವೀರ ಕುಮಾರರ ಸಂಘದ ಲಕ್ಷ್ಮಣ್, ರಾಜಣ್ಣ, ಮಂಜುನಾಥ್, ದಶರಥ್, ವಹ್ನಿಕುಲ ಕ್ಷತ್ರಿಯ ಸಮುದಾಯದ ಮುಖಂಡರು ಸೇರಿದಂತೆ ಇನ್ನಿತರರಿದ್ದರು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ

9845085793.          7349337989

Leave a Reply

Your email address will not be published. Required fields are marked *