ಕಡತನಮಲೆ ಗ್ರಾಮದಲ್ಲಿ ರೈತರಿಗೆ ತೆಂಗಿನ ಸಸಿಗಳ ವಿತರಣೆ :

ಯಲಹಂಕ : ಅರಣ್ಯ ಸಂಪತ್ತು, ಕೆರೆ, ಕುಂಟೆಗಳ ಸಂರಕ್ಷಣೆ ಸೇರಿದಂತೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು, ಇಲ್ಲದಿದ್ದರೆ ಭವಿಷ್ಯದ ದಿನಗಳು ಕರಾಳವಾಗಲಿವೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.

ಸ್ವಚ್ಛ ಭಾರತ ಮತ್ತು ಹಸಿರು ಪರಿಸರ ಸಂರಕ್ಷಣೆಗೆ ಪ್ರದಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ಹಿನ್ನೆಲೆಯಲ್ಲಿ ಯಲಹಂಕ ಕ್ಷೇತ್ರದ ಅರಕೆರೆ ಗ್ರಾ.ಪಂ.ವ್ಯಾಪ್ತಿಯ ಕಡತನಮಲೆ ಗ್ರಾಮದಲ್ಲಿ ರೈತರಿಗೆ ಸಾವಿರ ತೆಂಗಿನ ಸಸಿಗಳನ್ನು ವಿತರಿಸಿ ಮಾತನಾಡಿದ ಅವರು ‘ಅರಣ್ಯ ಸಂಪತ್ತು ದೇಶದ ಅಮೂಲ್ಯ ಸಂಪತ್ತು, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ ಹಾಳು ಮಾಡುವ ಹೀನ ಕೃತ್ಯ ಮಾಡಬಾರದು. ದಶಕಗಳ ಹಿಂದೆ ಪ್ರತಿ ವರ್ಷವೂ ಗ್ರಾಮೀಣ ಕೆರೆಗಳು ತುಂಬಿ ಕೋಡಿ ಬೀಳೂತ್ತಿದ್ದವು, ಪರಿಸರ ಕೂಡ ಅಷ್ಟೇ ಸ್ವಚ್ಛಂದವಾಗಿತ್ತು. ಆಗ ಮನುಷ್ಯನ ಆರೋಗ್ಯವು ಸಹ ಚೆನ್ನಾಗಿತ್ತು. ಎಂದಿನಿಂದ ಮನುಷ್ಯ ತನ್ನ ಸ್ವಾರ್ಥಕ್ಕೆ, ದುರಾಸೆಗೆ ಪರಿಸರವನ್ನು ಹಾಳು ಮಾಡುವ ಕೆಲಸಕ್ಕೆ ಮುಂದಾದನೋ, ಅಂದಿನಿಂದ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ, ಪರಿಸರದಲ್ಲಿ ಸಾಕಷ್ಟು ನಕಾರಾತ್ಮಕ ವ್ಯತ್ಯಾಸಗಳಾಗಿವೆ. ಮನುಷ್ಯನ ಆರೋಗ್ಯದಲ್ಲಿ ವೈಪರೀತ್ಯ ಗಳಾಗಿದ್ದು, ಹೊಸ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಪರಿಸರದ ಮೇಲೆ ಮನುಷ್ಯ ಎಸಗಿರುವ ದೌರ್ಜನ್ಯ, ದುರ್ಬಳಕೆಯೇ ಇವೆಲ್ಲಕ್ಕೂ ಮೂಲ ಕಾರಣವಾಗಿದೆ. ಪರಿಸರ ಸಂರಕ್ಷಣೆಯ ದಿಸೆಯಲ್ಲಿ ನಾವು ಈಗಲೂ ಜಾಗ್ರತೆ ವಹಿಸದಿದ್ದರೆ ನಮ್ಮ ವಿನಾಶಕ್ಕೆ ನಾವೇ ಕಾರಣರಾಗುತ್ತೇವೆ ಎಂದರು.

ಸ್ವಚ್ಛ ಮತ್ತು ಹಸಿರು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿರುವ ಕರೆಯ ಮೇರೆಗೆ ಇಂದು ತೆಂಗಿನ ಸಸಿಗಳನ್ನು ವಿತರಿಸುವುದರ ಜತೆಗೆ ಕೆರೆಯ ಸುತ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಯಲಹಂಕ ಕ್ಷೇತ್ರದ ಪ್ರತಿ ಹಳ್ಳಿಗೂ ಸಸಿಗಳ ವಿತರಣೆಯನ್ನು ವಿಸ್ತರಿಸಲಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಬೆಂ.ಉತ್ತರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ಜೆ.ಮೂರ್ತಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡ ದಿಬ್ಬೂರು ಜಯಣ್ಣ, ಅರಕೆರೆ ಗ್ರಾ.ಪಂ‌.ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ ಯಲಹಂಕ ಗ್ರಾ.ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ. ರಾಜೇಶ್, ತಾ.ಪಂ‌.ಮಾಜಿ ಅಧ್ಯಕ್ಷ ಮುನಿದಾಸಪ್ಪ, ಗ್ರಾ.ಪಂ‌.ಅಧ್ಯಕ್ಷೆ ಆಂಜಿನಮ್ಮ ಚೌಡಪ್ಪ, ಉಪಾಧ್ಯಕ್ಷ ಕೆ.ಎಂ.ಅರಸೇಗೌಡ, ರಾಜಾನುಕುಂಟೆ ಗ್ರಾ.ಪಂ‌.ಮಾಜಿ ಅಧ್ಯಕ್ಷ ನರಸಿಂಹಮೂರ್ತಿ (ಎಸ್.ಟಿ.ಡಿ.ಮೂರ್ತಿ), ಆರ್ ಎಸ್ಸೆಸ್ಎನ್ ಬ್ಯಾಂಕ್ ನಿರ್ದೇಶಕ ಮಂಜುನಾಥರೆಡ್ಡಿ, ಬೆಂ.ಉತ್ತರ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ರಾಜೇಂದ್ರ, ಸಿಎಲ್ ಎನ್ ಗೌಡ, ನಂಜೇಗೌಡ, ಚೊಕ್ಕನಹಳ್ಳಿ ನಾಗೇಶ್, ರಮೇಶ್, ಅನಿಲ್ ಬೈರಾಪುರ ಸೇರಿದಂತೆ ಇನ್ನಿತರರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

ಆರ್ ಹನುಮಂತು

9845085793

7349337989

Leave a Reply

Your email address will not be published. Required fields are marked *