ಸ್ವಚ್ಛತಾ ಸಿಬ್ಬಂದಿಗಳು, ಗ್ರಾ.ಪಂ. ಕಚೇರಿ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ಶಿಬಿರ :

ಯಲಹಂಕ : ಯಲಹಂಕ ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ರಾಜಾನುಕುಂಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಉಚಿತ ಆರೋಗ್ಯ ಶಿಬಿರವನ್ನು ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷೆ ಚನ್ನಮ್ಮ ಉದ್ಘಾಟಿಸಿದರು. 

ಉಚಿತ ಆರೋಗ್ಯ ಶಿಬಿರದಲ್ಲಿ ರಾಜಾನುಕುಂಟೆ, ಸಿಂಗನಾಯಕನಹಳ್ಳಿ, ಅರಕೆರೆ ಮತ್ತು ಗಂಟಿಗಾನಹಳ್ಳಿ ಗ್ರಾಮ ಪಂಚಾಯಿತಿಗಳ ಸುಮಾರು 250ಕ್ಕೂ ಹೆಚ್ಚು ಸ್ವಚ್ಛತಾ  ಸಿಬ್ಬಂದಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡು ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮ ಉದ್ದೇಶಿಸಿ ಯಲಹಂಕ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಧು ಎಲ್. ಮಾತನಾಡಿ ‘ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳ ಸ್ವಚ್ಛತಾ ಸಿಬ್ಬಂದಿಗಳು ಮತ್ತು ಗ್ರಾ.ಪಂ.ಕಚೇರಿ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಈ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದು, ಶಿಬಿರದಲ್ಲಿ ಎಲ್ಲಾ ರೀತಿಯ ಆರೋಗ್ಯ ಸವಲತ್ತುಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪಂಚಾಯಿತಿಯ ಎಲ್ಲಾ ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಕಡ್ಡಾಯವಾಗಿದ್ದು, ವಿಮೆಯ ನೋಂದಣಿಗೂ ಸಹ ಶಿಬಿರದಲ್ಲಿ ಕ್ರಮ ವಹಿಸಲಾಗಿದೆ. ಸದೃಢ ಆರೋಗ್ಯ ಅಭಿಯಾನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಬೇಕೆಂದು ತಿಳಿಸಿದ ಅವರು   ಮನೆಯ ಅಂಗಳ, ರಸ್ತೆ ಬದಿ ಸೇರಿದಂತೆ ನಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮರಯ್ಯ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶೈಲೇಶ್ ಕುಮಾರ್, ರಾಜಾನುಕುಂಟೆ ಗ್ರಾ.ಪಂ.ಪಿಡಿಓ ನಾಗರಾಜ್, ಅರಕೆರೆ ಪಿಡಿಓ ತಿಮ್ಮಯ್ಯ, ಸಿಂಗನಾಯಕನಹಳ್ಳಿ ಪಿಡಿಓ ದಾಮೋದರ್, ಐಇಸಿ ಸಂಯೋಜಕ ನವೀನ್ ಬಾಬು ಎನ್., ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳ ಸಿಬ್ಬಂದಿ ವರ್ಗದವರು, ಸ್ವಚ್ಛತಾ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

Public power

R Hanumanthu

Kogilu layout

Yelahanka

9845085793

Leave a Reply

Your email address will not be published. Required fields are marked *