

















ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳ ಸಹಸ್ರಾರು ಕಾರ್ಯಕರ್ತರು, ಬಿಜೆಪಿ ಮುಖಂಡರು ಭಾಗಿ :
ಯಲಹಂಕ : ಯಲಹಂಕ ಕ್ಷೇತ್ರದ ಬೆಟ್ಟಹಳ್ಳಿ, ಸಂಭ್ರಮ್ ಕಾಲೇಜು, ಎಂ.ಎಸ್.ಪಾಳ್ಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ 49 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಸಾಮೂಹಿಕ ಗಣೇಶೋತ್ಸವ ಮತ್ತು ವಿಸರ್ಜನೆ ಕಾರ್ಯಕ್ರಮ ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ, ಹಿಂದೂಪರ ಸಂಘಟನೆಗಳು ಮತ್ತು ಭಾರತೀಯ ಜನತಾ ಪಕ್ಷದ ಸಹಸ್ರಾರು ಮುಖಂಡರ ಸಹಯೋಗದೊಂದಿಗೆ ಭಾನುವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಬೆಳಿಗ್ಗೆ 10 ಗಂಟೆಗೆ ಸಂಭ್ರಮ್ ಕಾಲೇಜು ಬಳಿಯಿಂದ ಆರಂಭವಾದ ಸಾಮೂಹಿಕ ಗಣೇಶೋತ್ಸವದ ಮೆರವಣಿಗೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಹೊತ್ತ ವಿಜೃಂಭಣೆಯ ಮೆರವಣಿಗೆ ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನದ ನಡುವೆ ಎಂ.ಎಸ್.ಪಾಳ್ಯ, ಮಸೀದಿ ರಸ್ತೆ, ಬೆಟ್ಟಹಳ್ಳಿ, ತಿರುಮಲ ಡಾಬಾ ಕ್ರಾಸ್, ಮೇ.ಉನ್ನಿಕೃಷ್ಣನ್ ರಸ್ತೆ, ಡೈರಿ ವೃತ್ತ, ಯಲಹಂಕ ಉಪನಗರ, ಚಿಕ್ಕಬೊಮ್ಮಸಂದ್ರ ಕ್ರಾಸ್ ಮಾರ್ಗವಾಗಿ ಅಳ್ಳಾಳಸಂದ್ರ ಕೆರೆಯ ಪಕ್ಕದ ಕಲ್ಯಾಣಿಯವರೆಗೆ ಸಾಗಿ, ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು.
ಈ ವೇಳೆ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮಾತನಾಡಿ ‘ಸಾಮೂಹಿಕ ಗಣೇಶೋತ್ಸವ ಕಾರ್ಯಕ್ರಮ ಪ್ರತಿವರ್ಷ ಅತ್ಯಂತ ವಿಜೃಂಭಣೆಯಿಂದ ನಡೆಯುವ ವೈಭವದ ಕಾರ್ಯಕ್ರಮವಾಗಿದ್ದು, 49 ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಾ ಬಂದಿದೆ. ಇದಕ್ಕಾಗಿಯೇ ‘ಸಾಮೂಹಿಕ ಗಣೇಶೋತ್ಸವ ಸಮಿತಿ’ ಎಂಬ ಪ್ರತ್ಯೇಕವಾದ ಸಮಿತಿಯನ್ನು ರಚಿಸಿಕೊಂಡಿದ್ದು, ಸಮಿತಿಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಮುಖಂಡರು ಸೇರಿದಂತೆ ಹಲವು ಪದಾಧಿಕಾರಿಗಳಿದ್ದು, ಇವರ ಸಹಯೋಗದೊಂದಿಗೆ ನೂರಾರು ಗಣೇಶ ಮೂರ್ತಿಗಳನ್ನು ಉತ್ಸವದ ಮಾದರಿಯಲ್ಲಿ ಸಾಮೂಹಿಕ ಮೆರವಣಿಗೆಯ ಮೂಲಕ ಅಳ್ಳಾಳಸಂದ್ರ ಕೆರೆಯ ಪಕ್ಕದಲ್ಲಿರುವ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಗುವುದು. ವರ್ಷ ಕಳೆದಂತೆ ಸಾಮೂಹಿಕ ಗಣೇಶೋತ್ಸವ ಕಾರ್ಯಕ್ರಮ ವಿಜೃಂಭಣೆಯ ಪರಾಕಾಷ್ಠೆ ತಲುಪುತ್ತಿರುವುದು ಸಂತೋಷದ ಸಂಗತಿ ಎಂದರು.
ಸಾಮೂಹಿಕ ಗಣೇಶೋತ್ಸವದಲ್ಲಿ ಬಿಜೆಪಿ ಯುವ ಮುಖಂಡ ಅಲೋಕ್ ವಿಶ್ವನಾಥ್, ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್ ಎನ್ ರಾಜಣ್ಣ, ಹಿಂದೂ ಜಾಗರಣಾ ವೇದಿಕೆಯ ಬೆಂ. ನಗರ ಸಂಚಾಲಕ ಹೊನ್ನೇನಹಳ್ಳಿ ರಾಜಣ್ಣ, ಯಲಹಂಕ ನಗರ ಮಂಡಲ ಬಿಜೆಪಿ ಪದಾಧಿಕಾರಿಗಳಾದ ಮುರಾರಿರಾಮು, ವಿ.ಪವನ್ ಕುಮಾರ್, ಈಶ್ವರ್, ಗ್ರಾ.ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಸಾಮೂಹಿಕ ಗಣೇಶೋತ್ಸವ ಸಮಿತಿಯ ಸಂಚಾಲಕ, ಅಟ್ಟೂರು ನಾರಾಯಣಸ್ವಾಮಿ, ಬಿಜೆಪಿ ವಾರ್ಡ್ ಅಧ್ಯಕ್ಷರಾದ ನರಸಿಂಹ ಮೂರ್ತಿ, ವಿ.ವಿ.ರಾಮಮೂರ್ತಿ, ಎಸ್.ರಾಜಣ್ಣ, ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ಎಸ್.ಜಿ.ನರಸಿಂಹ ಮೂರ್ತಿ, ಎಸ್.ಜಿ.ಪ್ರಶಾಂತ್ ರೆಡ್ಡಿ, ನಗರ ಮಂಡಲ ಯುವ ಮೋರ್ಚಾದ ಎಚ್.ಎಸ್.ಕಿರಣ್, ಅಕ್ಷತ್, ಯಲಹಂಕ ಜಯಣ್ಣ, ಮಹಿಳಾ ಮೋರ್ಚಾದ ಗೌರಿ ಹರೀಶ್ ಸೇರಿದಂತೆ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಹಿಂದೂಪರ ಸಂಘಟನೆಗಳ ಮತ್ತು ಬಿಜೆಪಿ ಪಕ್ಷದ ಸಹಸ್ರಾರು ಕಾರ್ಯಕರ್ತರಿದ್ದರು.