









‘ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ’ದಿಂದ ಅದ್ಧೂರಿ 70ನೇ ಕನ್ನಡ ರಾಜ್ಯೋತ್ಸವ :
ಯಲಹಂಕ : ಭಾಷೆಯ ವಿಸ್ತರಣೆ ಮತ್ತು ವರ್ಗಾವಣೆಯಲ್ಲಿ ಸಾಹಿತ್ಯ ಮಹತ್ವದ ಪಾತ್ರ ವಹಿಸುತ್ತದೆ ಎಂದು ‘ಕಾಂತಾರ’ ಖ್ಯಾತಿಯ ಗೀತಸಾಹಿತಿ ಪ್ರಮೋದ್ ಮರವಂತೆ ಅಭಿಪ್ರಾಯಪಟ್ಟರು.
ಯಲಹಂಕ ಉಪನಗರ 4ನೇ ಹಂತದಲ್ಲಿರುವ ‘ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ’ದ ವತಿಯಿಂದ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ‘ಕನ್ನಡ ಕೇವಲ ಒಂದು ಭಾಷೆ ಮಾತ್ರವಲ್ಲ, ಅದೊಂದು ಸಂಸ್ಕೃತಿ, ಪರಂಪರೆ ಆಚಾರ. 1956ರಲ್ಲಿ ರಚನೆಗೊಂಡ ಕರ್ನಾಟಕ ರಾಜ್ಯ ಅಂದಿನಿಂದ ಇಂದಿನವರೆಗೆ ಸಾಹಿತ್ಯ, ಶಿಕ್ಷಣ, ಕಲೆ, ಸಂಸ್ಕೃತಿ ಹೀಗೆ ಎಲ್ಲಾ ರಂಗಗಳಲ್ಲಿ ಸಮೃದ್ಧವಾಗಿ ಮುನ್ನಡೆದು ಬಂದಿದ್ದು, ದೇಶದಲ್ಲಿ ವಿಭಿನ್ನ ರೀತಿಯ ಛಾಪು ಮೂಡಿಸಿದೆ. ಇತ್ತೀಚೆಗೆ ಕನ್ನಡ ಭಾಷೆ ಬಳಕೆಯಲ್ಲಿ ಕ್ಷೀಣವಾಗುತ್ತಿದೆ ಎಂಬ ಅಪಸ್ವರವಿದೆ, ಕನ್ಮಡಿಗರಾದ ನಾವು ನಮ್ಮ ಮಕ್ಕಳೊಂದಿಗೆ ಕನ್ನಡ ಮಾತನಾಡುವ, ಕನ್ನಡ ಸಾಹಿತ್ಯ ಮತ್ತು ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಇದನ್ನು ದೂರ ಮಾಡಬೇಕು. ಸಾಹಿತ್ಯ ಓದುವುದರಿಂದ ಭಾಷೆಯ ಕಲಿಕೆ, ಜ್ಞಾನಾರ್ಜನೆಯ ಜೊತೆಗೆ ಸಂಸ್ಕಾರ ತಾನಾಗಿಯೇ ಬರುತ್ತದೆ ಈ ದಿಸೆಯಲ್ಲಿ ನಾವು ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಕನ್ನಡ ಗೀತೆಗಳ ಗಾಯನ, ಶುದ್ಧ ಕನ್ನಡ ಮಾತನಾಡುವ ಸ್ಪರ್ಧೆ, ರಸಪ್ರಶ್ನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ನೆರವೇರಿತು.
70ನೇ ಕನ್ನಡ ರಾಜ್ಯೋತ್ಸವದ ಈ ಸಮಾರಂಭದಲ್ಲಿ ‘ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ’ದ ಅಧ್ಯಕ್ಷ ಶೇಖರ್ ಶೆಟ್ಟಿ, ಉಪಾಧ್ಯಕ್ಷ ಜಯರಾಮ್ ಶೆಟ್ಟಿ, ಕಾರ್ಯದರ್ಶಿ ಅಶೋಕ್ ಹೆಬ್ಬಾರ್, ಖಜಾಂಚಿ ವಿಶ್ವನಾಥ್ ಶೆಟ್ಟಿ, ಮಹಿಳಾ ಉಪಾಧ್ಯಕ್ಷೆ ಶ್ರೀಲತಾ ಹರೀಶ್ ಶೆಟ್ಟಿ, ಪೂರ್ವ ಅಧ್ಯಕ್ಷರಾದ ಪರಿಕಾ ಭಾಸ್ಕರ್ ಶೆಟ್ಡಿ, ಕೃಷ್ಣಕುಮಾರ್ ಹೆಗಡೆ, ನಿವೃತ್ತ ವಿಧಾನಸೌಧ ಕಾರ್ಯದರ್ಶಿ ಕೆ.ಸುಧಾಕರ್ ಶೆಟ್ಟಿ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಸುಬ್ಬರಾವ್ ಸೇರಿದಂತೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಿದ್ದರು.
ಕಾರ್ಯಕ್ರಮದಲ್ಲಿ ಪ್ರಮೋದ್ ಮರವಂತೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
