






ಯಲಹಂಕ : ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಯೋಜನೆ ಅಡಿಯಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮೂಲ್) ಮತ್ತು ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ 8ನೇ ಸುತ್ತಿನ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಕಾರ್ಯಕ್ರಮಕ್ಕೆ ಶಾಸಕ ಎಸ್.ಆರ್. ವಿಶ್ವನಾಥ್ ತಮ್ಮದೇ ಹಸು ಮತ್ತು ಕರುವಿಗೆ ಲಸಿಕೆ ಹಾಕಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು “ಕಾಲುಬಾಯಿ ಜ್ವರ ನಿಯಂತ್ರಣದ ಲಸಿಕೆ ಹಾಕಿಸುವುದರಿಂದ ಹಸುಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ ಎಂಬ ತಪ್ಪುಕಲ್ಪನೆ ನಮ್ಮ ರೈತರಲ್ಲಿದೆ, ಇದು ಸತ್ಯಕ್ಕೆ ದೂರವಾದ ಸಂಗತಿ. ರೈತರು ಇಂತಹ ಊಹಾ-ಪೋಹಗಳನ್ನು ನಂಬದೆ, ತಪ್ಪದೆ ತಮ್ಮ ಹಸು, ಕರುಗಳಿಗೆ ಕಾಲು ಬಾಯಿ ಜ್ವರ ನಿಯಂತ್ರಣ ಲಸಿಕೆ ಹಾಕಿಸುವ ಮೂಲಕ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಮಾತನಾಡಿ ‘ಕಾಲುಬಾಯಿ ರೋಗ ನಿಮೂರ್ಲನೆಯ ಮಹತ್ವದ ಉದ್ದೇಶದಿಂದ ಕೈಗೊಂಡಿರುವ ಈ ಕಾರ್ಯಕ್ರಮ ನವೆಂಬರ್ 3ರಿಂದ ಆರಂಭಗೊಂಡು ಮುಂದಿನ ಒಂದು ತಿಂಗಳ ಅವಧಿಯ ವರೆಗೆ ನಡೆಯಲಿದೆ. ಬಮೂಲ್ ವ್ಯಾಪ್ತಿಯಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ರಾಸುಗಳಿದ್ದು, ರಾಸುಗಳಿಗೆ ಹಾಕಿರುವ ಓಲೆಯ ಆಧಾರದ ಮೇಲೆ ಪ್ರತಿ ರಾಸುಗಳ ಮಾಹಿತಿ ನಮ್ಮ ಬಳಿ ಇದೆ. ಇದರ ಆಧಾರದ ಮೇಲೆ ನಮ್ಮ ಪಶುವೈದ್ಯರು ಪ್ರತಿ ರೈತರ ಮನೆ ಬಾಗಿಲಿಗೆ ತೆರಳಿ ಕಾಲುಬಾಯಿ ಜ್ವರ ನಿಯಂತ್ರಣದ ಲಸಿಕೆ ಹಾಕಲಿದ್ದಾರೆ. ಪ್ರತಿಶತ 100% ರಾಸುಗಳಿಗೆ ಲಸಿಕೆ ಹಾಕಿಸುವುದು ನಮ್ಮ ಗುರಿಯಾಗಿದ್ದು, ಈ ಗುರಿ ಸಾಧನೆಗೆ ರೈತರು ಸಹ ತಮ್ಮ ರಾಸುಗಳಿಗೆ ಲಸಿಕೆ ಹಾಕಿಸುವ ಮೂಲಕ ಸಹಕರಿಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಪರಮೇಶ್ವರ್, ಹಿರಿಯ ಬಿಜೆಪಿ ಮುಖಂಡ ಎಸ್.ಎನ್.ರಾಜಣ್ಣ, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ವಿಜಯಕುಮಾರ್, ಬಿಜೆಪಿ ಮುಖಂಡರಾದ ಬ್ಯಾತ ಸುರೇಶ್, ಎಸ್.ಜಿ.ಪ್ರಶಾಂತ್ ರೆಡ್ಡಿ, ಶಿವಾನಂದ್, ಕೆ.ಬಾಬು ಸೇರಿದಂತೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರಿದ್ದರು.
