











ಹಾಲು ಉತ್ಪಾದಕರಿಗೆ ವಿವಿಧ ಸವಲತ್ತುಗಳ ವಿತರಣೆ :
ಯಲಹಂಕ : ಯಲಹಂಕ ಕ್ಷೇತ್ರದ ‘ಕಾಳತಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ’ದಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕ ರೈತರಿಗೆ ನಂದಿನಿ ವತಿಯಿಂದ ಹಾಲಿನ ಕ್ಯಾನ್ ವಿತರಣೆ, ಹೊಸದಾಗಿ ಹಸುಗಳನ್ನು ಖರೀದಿಸುವ ಸದಸ್ಯರುಗಳಿಗೆ ಸಂಘದ ಅದ್ಯಕ್ಷರಿಂದ ತಲಾ 25 ಸಾವಿರ ನಗದು ಮೊಬಲಗು, ರಾಸುಗಳಿಗೆ ಕಾಲು ಬಾಯಿ ಜ್ವರದ ಲಸಿಕೆ ಸೇರಿದಂತೆ ವಿವಿಧ ಸವಲತ್ತುಗಳನ್ನು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅವರು ವಿತರಿಸಿದರು.
ಇದೇ ವೇಳೆ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂ.ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅವರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಅಡಳಿತ ಮಂಡಳಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳೊಂದಿಗೆ ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ, ಉತ್ತಮ ಗುಣಮಟ್ಟದ ಹಾಲು ಶೆಖರಣೆ, ಸಂಘಗಳಲ್ಲಿ ಲೆಕ್ಕ ಪುಸ್ತಕಗಳ ಮಾಹಿತಿ ಹಾಗೂ ರಾಸುಗಳ ತಳಿ ಅಭಿವೃದ್ಧಿ, ಸದಸ್ಯರುಗಳಿಗೆ ಬಮೂಲ್ ನಿಂದ ಸಿಗುವ ಅನುದಾನ ಮತ್ತು ಸೌಲಭ್ಯಗಳ ಕುರಿತು ಸಮಾಲೋಚನೆ ನಡೆಸಿದರು. ಸಂಘದ ವ್ಯಾಪ್ತಿಯಲ್ಲಿ ಯಾವುದೇ ಸಭೆ, ಸಮಾರಂಭಳಿದ್ದಲ್ಲಿ ನಂದಿನಿ ಉತ್ಪನ್ನಗಳನ್ನು ಮಾತ್ರ ಬಳಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕರೆ ನೀಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅವರು ಮಾತನಾಡಿ ‘ನವಂಬರ್ 1ರಂದು ಕಾಲು ಬಾಯಿ ಜ್ವರ ನಿಯಂತ್ರಣ ಲಸಿಕಾ ಅಭಿಯಾನಕ್ಕೆ ಶಾಸಕ ಎಸ್ ಆರ್ ವಿಶ್ವನಾಥ್ ಅವರು ತಮ್ಮದೇ ರಾಸುಗಳಿಗೆ ಲಸಿಕೆ ಹಾಕಿಸುವ ಮೂಲಕ ಚಾಲನೆ ನೀಡಿದ್ದರು, ಇದುವರೆಗೆ ಶೇಕಡಾ 70% ರಾಸುಗಳಿಗೆ ಲಸಿಕೆ ಹಾಕಿಸಲಾಗಿದ್ದು, ಶೇಕಡಾ 100% ಲಸಿಕೆ ಹಾಕಿಸುವ ಗುರಿ ಹೊಂದಲಾಗಿದೆ. ಆದರೆ ಕೆಲವು ರೈತರು ಲಸಿಕೆ ಹಾಕಿಸಿದರೆ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ, ರಾಸುಗಳ ಗರ್ಭಧಾರಣೆಗೆ ಸಮಸ್ಯೆಯಾಗುತ್ತದೆ ಎಂದು ಪೂರ್ವಗ್ರಹ ಪೀಡಿತರಾಗಿದ್ದಾರೆ. ರೈತರು ಈ ರೀತಿಯ ತಪ್ಪು ಕಲ್ಪನೆಗಳನ್ನು ಬಿಟ್ಟು ರಾಸುಗಳಿಗೆ ಲಸಿಕೆ ಹಾಕಿಸಬೇಕು. ಲಸಿಕೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಬದಲಿಗೆ ರಾಸುಗಳು ಕಾಲುಬಾಯಿ ಜ್ವರ ಮುಕ್ತವಾಗುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಕಾಳತಮ್ಮನಹಳ್ಳಿ ಡೈರಿ ಅಧ್ಯಕ್ಷ ರಾಜೇಶ್, ಬ್ಯಾಲಕೆರೆ ಡೈರಿ ಅಧ್ಯಕ್ಷ ವಿಜಯಕುಮಾರ್, ಗುಣಿ ಅಗ್ರಹಾರ ಡೈರಿ ಅಧ್ಯಕ್ಷ ರಾಮಣ್ಣ, ಕಾಳತಮ್ಮನಹಳ್ಳಿ ಗ್ರಾ.ಪಂ.ಸದಸ್ಯ ಮಂಜುನಾಥ್, ಬ್ಯಾಲಕೆರೆ ಗ್ರಾ.ಪಂ.ಸದಸ್ಯ ಮಂಜುನಾಥ್, ರಾಜಾನುಕುಂಟೆ ಶಾಖಾ ಕಚೇರಿ ಡಿ.ಎಂ.ಪ್ರಸನ್ನ ಕುಮಾರ್, ಬಿಜೆಪಿ ಮುಖಂಡರಾದ ಮಹದೇವ್ ಸೇರಿದಂತೆ ಕಾರ್ಯಕಾರಿ ಮಂಡಳಿಯ ಸದಸ್ಯರು, ಹಾಲು ಉತ್ಪಾದಕ ಸದಸ್ಯರು, ಸಂಘದ ಸಿಬ್ಬಂದಿ ವರ್ಗದವರು ಹಾಗೂ ಯುವ ಮುಖಂಡರಿದ್ದರು.
ಕಾಲುಬಾಯಿ ಜ್ವರ ನಿಯಂತ್ರಣ ಲಸಿಕಾ ಅಭಿಯಾನದ ಅಂಗವಾಗಿ ಕಡತನಮಲೆ ಗ್ರಾಮದಲ್ಲಿ ರಾಸುಗಳಿಗೆ ಲಸಿಕೆ ಹಾಕಿಸುವ ಅಭಿಯಾನಕ್ಕೆ ಸತೀಶ್ ಕಡತನಮಲೆ ಚಾಲನೆ ನೀಡಿದರು.
