ಡೈರಿಗಳಿಗೆ ಹೊಸ ಕಾಯಕಲ್ಪ ನೀಡುವುದು ನಮ್ಮ ಧ್ಯೇಯ : ಸತೀಶ್ ಕಡತನಮಲೆ
ಹೂವಿನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ :
ಬ್ಯಾಟರಾಯನಪುರ : ವ್ಯವಸ್ಥಿತ ಕಟ್ಟಡ, ಹಾಲು ಸಂಗ್ರಹಣೆ ಮತ್ತು ಗುಣಮಟ್ಟ ಮಾಪನಕ್ಕೆ ಅತ್ಯಾಧುನಿಕ ತಾಂತ್ರಿಕ ಸಲಕರಣೆಗಳ ಸೌಲಭ್ಯ, ವ್ಯವಸ್ಥಿತ ಲೆಕ್ಕಪತ್ರಗಳ ನಿರ್ವಹಣೆ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹೊಸ ಕಾಯಕಲ್ಪ ನೀಡುವ ಮೂಲಕ ಪ್ರಗತಿ ಪಥದಲ್ಲಿ ಕೊಂಡೊಯ್ಯು ವುದು ಬೆಂಗಳೂರು ಹಾಲು ಒಕ್ಕೂಟದ ಪ್ರಸ್ತುತ ಆಡಳಿತ ಮಂಡಳಿಯ ಮುಖ್ಯ ಧ್ಯೇಯವಾಗಿದ್ದು ಈ ದಿಸೆಯಲ್ಲಿ ದಿಟ್ಠ ಹೆಜ್ಜೆ ಇಡುತ್ತಿದ್ದೇವೆ ಎಂದು ಬೆಂಗಳೂರು ಡೈರಿ ನಿರ್ದೇಶಕ ಸತೀಶ್ ಕಡತನಮಲೆ ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಹೂವಿನಾಯಕನ ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ‘ಉನ್ನತ ಪ್ರಗತಿ, ತ್ವರಿತ ಕಾರ್ಯನಿರ್ವಹಣೆಯ ಗುರಿಯೊಂದಿಗೆ, ಅಧಿಕಾರಕ್ಕೆ ಬಂದ ಕೇವಲ ಏಳೂವರೆ ತಿಂಗಳಲ್ಲಿ ನಮ್ಮ ವ್ಯಾಪ್ತಿಯಲ್ಲಿ 18 ಡೈರಿ ಹೊಸ‌ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, 9 ನೂತನ ಕಟ್ಟಡಗಳನ್ನು ಉದ್ಘಾಟಿಸಲಾಗಿದೆ. ಮುಂದಿನ ನಾಲ್ಕೂವರೆ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಪ್ರಗತಿಯನ್ನು ಕೇವಲ ಕಟ್ಟಡ, ತಾಂತ್ರಿಕ ಸವಲತ್ತುಗಳಿಗಷ್ಟೇ ಸೀಮಿತಗೊಳಿಸದೆ, ಹಾಲು ಉತ್ಪಾದಕ ರೈತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಾಲ ಸೌಲಭ್ಯ, ನೆರವು ನೀಡುವುದು ಸಹ ನಮ್ಮ ಬಹುಮುಖ್ಯ ಗುರಿಯಾಗಿದ್ದು, ಈ ದಿಸೆಯಲ್ಲಿ ರಾಸುಗಳ ಖರೀದಿ, ಮೇವು, ಪೋಷಕ ಆಹಾರ ಖರೀದಿಗೆ ನೆರವು, ರಾಸುಗಳು ಮೃತಪಟ್ಟರೆ ಪರಿಹಾರ, ಅನಾರೋಗ್ಯ ಪೀಡಿತ ಮತ್ತು ಮರಣ ಹೊಂದಿದ ಹಾಲು ಉತ್ಪಾದಕರಿಗೆ ನೆರವು, ವಿಮಾ ಸೌಲಭ್ಯ, ಶೆಡ್ ನಿರ್ಮಾಣಕ್ಕೆ ಸಾಲ ಸೌಲಭ್ಯ ಸೇರಿದಂತೆ ಹಾಲು ಉತ್ಪಾದಕರ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಾಗುತ್ತಿದ್ದು, ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಇದೇ ವೇಳೆ ಅನಾರೋಗ್ಯಕ್ಕೆ ತುತ್ತಾದ ಹಾಲು ಉತ್ಪಾದಕ ರೈತರಿಗೆ ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ನೀಡಲಾಗುವ 25 ಸಾವಿರ ರೂಗಳ ಆರೋಗ್ಯ ವೆಚ್ಚದ ಡಿ.ಡಿ. ಮತ್ತು ಬಮೂಲ್ ವಿಮಾ ಯೋಜನೆ ಅಡಿಯಲ್ಲಿ ಮರಣ ಹೊಂದಿದ ಹಾಲು ಉತ್ಪಾದಕರ ಕುಟುಂಬದ ಸದಸ್ಯರಿಗೆ 1 ಲಕ್ಷ ರೂ ಡಿ.ಡಿ.ಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹೂವಿನಾಯಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷೆ ಶೋಭಮ್ಮ, ಗ್ರಾಮ ಪಂಚಾಯತಿ ಸದಸ್ಯರಾದ ಮುನೇಗೌಡ, ಎಂ.ಗಿರೀಶ್, ಡೈರಿ ನಿರ್ದೇಶಕರಾದ ವಿಶ್ವನಾಥ್ ಕೆ., ಗೋವಿಂದಪ್ಪ, ಸುರೇಶ್ ಕೆ., ರಾಘವೇಂದ್ರ, ಉಮೇಶ್, ಕೃಷ್ಣಪ್ಪ, ಆಂಜಿನಿಗೌಡ ಈ., ವೆಂಕಟಸ್ವಾಮಪ್ಪ, ಸುನಂದಮ್ಮ, ನೀಲಮ್ಮ,ಮುಖ್ಯ ಕಾರ್ಯ ನಿರ್ವಾಹಕ ಎಚ್.ಎಂ.ಮುನಿಯಪ್ಪ, ಸಿಬ್ಬಂದಿಗಳಾದ ಜಿ.ಕೃಷ್ಣಮೂರ್ತಿ, ಕುನಾಲ್ ಕುಮಾರ್ ಜಿ. ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *