




ರೈತನೆಂಬ ಭಾಗ್ಯವಂತನ ಬದುಕಿಗೆ ಹೈನುಗಾರಿಕೆ ಆಸರೆ : ಸತೀಶ್ ಕಡತನಮಲೆ
ಯಲಹಂಕ : ರೈತನೆಂಬ ಭಾಗ್ಯವಂತನ ಬದುಕಿಗೆ ಹೈನುಗಾರಿಕೆ ಆಸರೆಯಿದ್ದಂತೆ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅಭಿಪ್ರಾಯಪಟ್ಟರು.
ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯ ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಉತ್ಪಾದಕರಿಗೆ ಮ್ಯಾಟ್ ಮತ್ತು ವೈದ್ಯಕೀಯ ವೆಚ್ಚದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಬೆಂಗಳೂರು ಹಾಲು ಒಕ್ಕೂಟದ ಹೊಸ ಆಡಳಿತ ಮಂಡಳಿಯ ಸಮರ್ಥ ಕಾರ್ಯವೈಖರಿ ಯಿಂದಾಗಿ ಹಾಲು ಒಕ್ಕೂಟವು ಲಾಭದ ಹಾದಿಯಲ್ಲಿ ಸಾಗುತ್ತಿದ್ದು, ಲಾಭಾಂಶವನ್ನು ಹಾಲು ಉತ್ಪಾದಕರು, ಸಿಬ್ಬಂದಿ, ಸಹಕಾರ ಸಂಘಗಳಿಗೆ ಹಂಚುವ ಮೂಲಕ ಅವರ ಹಿತಕಾಯುವ ಕೆಲಸ ಮಾಡಿದೆ. ಹಾಲು ಉತ್ಪಾದಕ ರೈತರ ಹಿತರಕ್ಷಣೆಯ ದಿಸೆಯಲ್ಲಿ ಬಮೂಲ್ ವಿಮೆ, ರಾಸುಗಳ ಖರೀದಿಗೆ ನೆರವು, ದೊಡ್ಡ ಮಟ್ಟದಲ್ಲಿ ಹೈನುಗಾರಿಕೆ ಮಾಡಲು ಸಾಲ ಯೋಜನೆ ಸೇರಿದಂತೆ ಹಲವು ಜನೋಪಯೋಗಿ ಯೋಜನೆಗಳನ್ನು ರೂಪಿಸಿದೆ. ಒಟ್ಟಿನಲ್ಲಿ ಹಾಲು ಉತ್ಪಾದಕ ರೈತನೆಂಬ ಭಾಗ್ಯವಂತನ ಬದುಕಿಗೆ ಹೈನುಗಾರಿಕೆ ಆಸರೆಯಾಗಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಒಕ್ಕೂಟ ಕೈಗೊಂಡಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಹಿತವನ್ನು ಕಾಪಾಡಲು ಬಮೂಲ್ ಒಕ್ಕೂಟವು ಬದ್ಧವಾಗಿದ್ದು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಗತ್ಯ ಪ್ರೋತ್ಸಾಹ, ಸಹಕಾರವನ್ನು ಒಕ್ಕೂಟವು ನೀಡುತ್ತಿದೆ. ರೈತರು ಮತ್ತು ಗ್ರಾಹಕರ ಹಿತ ಕಾಪಾಡುವುದೇ ನಮ್ಮ ಧ್ಯೇಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು, ಶಿಬಿರ ಕಚೇರಿ ಅಧಿಕಾರಿಗಳು, ಹಾಲು ಉತ್ಪಾದಕ ರೈತರು ಸೇರಿದಂತೆ ಗ್ರಾಮಸ್ಥರಿದ್ದರು.
