ಜಕ್ಕೂರು ಕ್ರೆಡಿಟ್ ಆಪರೇಟಿವ್ ಸೊಸೈಟಿ ವತಿಯಿಂದ 135ನೇ ಅಂಬೇಡ್ಕರ್ ಜಯಂತಿ :
ಬ್ಯಾಟರಾಯನಪುರ : ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್ ಸಹಯೋಗದೊಂದಿಗೆ ಭಾನುವಾರ ಬೆಳಿಗ್ಗೆ 11 ಗಂಟೆಗೆ 135ನೇ ಅಂಬೇಡ್ಕರ್ ಜಯಂತಿ ಆಚರಿಸಲಾಗುವುದು ಎಂದು ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಕ್ಕೂರು ರವಿಕುಮಾರ್ ತಿಳಿಸಿದರು.
135ನೇ ಅಂಬೇಡ್ಕರ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ‘ಕಳೆದ 45 ವರ್ಷಗಳಿಂದ ಜಕ್ಕೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದ್ದು, ಅಂತೆಯೇ ಈ ವರ್ಷವೂ 135ನೇ ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಸಕಲ ಸಿದ್ಧತೆ ನಡೆಸಿದ್ದು, ಅಂಬೇಡ್ಕರ್ ಜಯಂತಿ ಪ್ರಯುಕ್ತ ಸುಮಾರು ನಾಲ್ಕು ಸಾವಿರ ಬಡ ಮಹಿಳೆಯರಿಗೆ ತವರು ಮನೆ ಉಡುಗೊರೆಯಾಗಿ ಸೀರೆ ವಿತರಣೆ ಹಾಗೂ ಪುರುಷರಿಗೆ ಸಮವಸ್ತ್ರ ವಿತರಣೆ ಮುಂತಾದ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂಬೇಡ್ಕರ್ ಜಯಂತಿಯ ಮಹತ್ವದ ಈ ಕಾರ್ಯಕ್ರಮವನ್ನು ಕಂದಾಯ ಸಚಿವ ಕೃಷ್ಣಭೈರೇಗೌಡ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಟಿ.ಛಲವಾದಿ ನಾರಾಯಣಸ್ವಾಮಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಿ ಬಸವಲಿಂಗಪ್ಪ ಅವರ ಭಾವಚಿತ್ರ ಅನಾವರಣಗೊಳಿಸ ಲಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾಕ್ಟರ್ ನಾಗಲಕ್ಷ್ಮಿ ಚೌಧರಿ ಅವರು ಮಹಿಳೆಯರಿಗೆ ತವರು ಮನೆ ಉಡುಗೊರೆ ವಿತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ಕೆಪಿಸಿಸಿ ಎಸ್ ವಿಭಾಗದ ರಾಜ್ಯಾಧ್ಯಕ್ಷರಾದ ಧರ್ಮಸೇನಾ, ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಸಂಯೋಜಕರು, ಮಹಾರಾಷ್ಟ್ರ ಉಸ್ತುವಾರಿಗಳಾದ ಡಾ.ಆನಂದ್ ಕುಮಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯಕ್ರಮದ ಅಧ್ಯಕ್ಷ ಜಕ್ಕೂರು ರವಿಕುಮಾರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಎಸ್.ಮಾರುತಿ, ಈ.ಕೃಷ್ಣಪ್ಪ, ವಿ.ನಾಗರಾಜಪ್ಪ, ಆಂಜಿನಪ್ಪ, ಪ್ರಮೋದ್, ಪ್ರಜ್ವಲ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *