



ಬ್ಯಾಟರಾಯನಪುರ : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಲಿತ ನಾಯಕರಲ್ಲ, ಅವರು ಸರ್ವ ಜನಾಂಗದ ನಾಯಕರು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಅಭಿಪ್ರಾಯ ಪಟ್ಟರು.
ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ಟ್ರಸ್ಟ್ ವತಿಯಿಂದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಜಕ್ಕೂರು ರವಿಕುಮಾರ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಡಾ.ಬಿ ಆರ್ ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಂಬೇಡ್ಕರ್ ಅವರನ್ನು ದಲಿತ ನಾಯಕರು ಎಂದು ಬಿಂಬಿಸುವ ಹುನ್ನಾರ, ಪ್ರಯತ್ನಗಳಿವೆಯಾದರೂ ಅವರು ದೇಶದ ಸರ್ವ ಜನಾಂಗಕ್ಕೆ ಸೇರಿದ ನಾಯಕರು ಸಂವಿಧಾನದ ಅಡಿಯಲ್ಲಿ ದೇಶದ ಪ್ರತಿ ಜಾತಿ, ಧರ್ಮ, ವರ್ಗಕ್ಕೂ ಸಮಾನತೆ, ಸಮಾನ ಅವಕಾಶ ನೀಡುವ ಮೂಲಕ ಅಂಬೇಡ್ಕರ್ ರವರು ದೇಶದ ಸರ್ವ ಜನಾಂಗದ ನಾಯಕ ಎನಿಸಿಕೊಂಡಿದ್ದಾರೆ. ವಿಶೇಷವಾಗಿ ಮಹಿಳೆಯರಿಗೆ ಪುರುಷರಿಗೆ ಸಮಾನವಾದ ಹಕ್ಕು,ಅವಕಾಶ ನೀಡಿದ್ದು ಡಾ.ಬಿ.ಆರ್. ಅಂಬೇಡ್ಕರ್ ಅವರು. ಹಿಂದೂ ಬಿಲ್ ಕೋಡ್ ಜಾರಿಗೆ ತಂದು ಮಹಿಳೆಯರಿಗೆ ಮತದಾನಕ್ಕೆ ಅವಕಾಶ, ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕು, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸುವ ಮೂಲಕ ದೇಶದ ಮಹಿಳೆಯರಿಗೆ ಸ್ಮರಣೀಯ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌಧರಿ ಅವರು ಮಾತನಾಡಿ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಅರಿವು ಬೆಳೆಸಿಕೊಳ್ಳಬೇಕು. ಶಿಕ್ಷಿತ ಮಹಿಳೆಯರಿಗೆ ಸಮಾಜದಲ್ಲಿ ಅಪೂರ್ವವಾದ ಅವಕಾಶಗಳಿವೆ, ಅನುಪಮವಾದ ಗೌರವ ದೊರೆಯುತ್ತದೆ ಈ ದಿಸೆಯಲ್ಲಿ ಮಹಿಳೆಯರು ಸುಶಿಕ್ಷಿತರಾಗಿ ಸಾಧನೆಯತ್ತ ಸಾಗಬೇಕು. ನಾನಿಂದು ಈ ವೇದಿಕೆಯ ಮೇಲೆ ನಿಂತು ಮಾತನಾಡುತ್ತಿರುವುದಕ್ಕೆ ನಾನು ಪಡೆದ ಶಿಕ್ಷಣವೇ ಕಾರಣ. ಶಿಕ್ಷಣಕ್ಕೆ ನಮ್ಮ ಭವಿಷ್ಯವನ್ನೇ ಬದಲಾಯಿಸಬಲ್ಲ ಶಕ್ತಿ ಇದೆ. ಇದನ್ನೇ ಬಾಬಾ ಸಾಹೇಬ್ ಅಂಬೇಡ್ಕರ್ ರವರು ‘ಶಿಕ್ಷಣ ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದಿದ್ದಾರೆ ಎಂದು ಮಹಿಳಾ ಶಿಕ್ಷಣದ ಮಹತ್ವ ಕುರಿತು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಜಕ್ಕೂರು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜಕ್ಕೂರು ರವಿಕುಮಾರ್ ಮಾತನಾಡಿ ‘ಕಳೆದ 45 ವರ್ಷಗಳಿಂದ ಅಂಬೇಡ್ಕರ್ ಅವರ ಜಯಂತಿಯನ್ನು ಶ್ರದ್ಧೆ ಹಾಗೂ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಕೊಂಚ ವಿಶೇಷ ರೀತಿಯಲ್ಲಿ ಆಚರಿಸಬೇಕೆಂಬ ಹಂಬಲದೊಂದಿಗೆ ಸುಮಾರು ಎರಡು ಸಾವಿರ ಮಹಿಳೆಯರಿಗೆ ತವರು ಮನೆ ಉಡುಗೊರೆಯಾಗಿ ಸೀರೆ, ಪುರುಷರಿಗೆ ಬಟ್ಟೆ ಸೇರಿದಂತೆ ಒಟ್ಟು ನಾಲ್ಕು ಸಾವಿರ ಮಂದಿಗೆ ಬಟ್ಟೆ ವಿತರಿಸಲಾಗಿದೆ. ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಜನ್ಮ ತಾಳಿ ರುವುದೇ ಬಡವರ ಸೇವೆಗಾಗಿ, ಮಹಿಳೆಯರ ಉನ್ನತಿಗಾಗಿ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಈ ಶುಭದಿನದಂದು ಬಡವರಿಗೆ ಒಂದಿಷ್ಟು ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದರು.
ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು, ಕಾರ್ಯಕ್ರಮದಲ್ಲಿ ಕೆಪಿಸಿಸಿ ಎಸ್.ಸಿ. ವಿಭಾಗದ ರಾಜ್ಯಾಧ್ಯಕ್ಷ ಧರ್ಮಸೇನಾ, ಕಾಂಗ್ರೆಸ್ ಮುಖಂಡರಾದ ಎಮ್.ಹನುಮಂತೇಗೌಡ, ಎಂ ಆನಂದ್, ಎನ್ ಎನ್ ಶ್ರೀನಿವಾಸಯ್ಯ, ಹರೀಶ್, ಬ್ಯಾಟರಾಯನಪುರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಸ್ ಸೋಮಶೇಖರ್, ಹಿರಿಯ ವಕೀಲರಾದ ರಾಮಚಂದ್ರಪ್ಪ, ಸೊಸೈಟಿ ನಿರ್ದೇಶಕರಾದ ವಿ.ನಾಗರಾಜಪ್ಪ, ಎಸ್ ಮಾರುತಿ, ಕೃಷ್ಣಪ್ಪ, ಆಂಜಿನಪ್ಪ ಸೇರಿದಂತೆ ಇನ್ನಿತರ ನಿರ್ದೇಶಕರು ಹಾಗೂ ಗಣ್ಯರಿದ್ದರು.
