






ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ :
ಯಲಹಂಕ : ನಗರದ ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿ ವ್ಯಾಪ್ತಿಯ ಹುಚ್ಚನಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್)ದ ನಿರ್ದೇಶಕ ಸತೀಶ್ ಕಡತನಮಲೆ ಬುಧವಾರ ಉದ್ಘಾಟಿಸಿದರು.
ಇದೇ ವೇಳೆ ಹಾಲು ಉತ್ಪಾದಕ ಸದಸ್ಯರಿಗೆ ಸಹಾಯ ಧನದ ಚೆಕ್ ವಿತರಣೆ, ಸಹಕಾರ ಸಂಘದ ಏಳಿಗೆ ಕುರಿತು ಸಂಘದ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು ನಿರ್ದೇಶಕ ರೊಂದಿಗೆ ಚರ್ಚೆ ನಡೆಸಿದ ಸತೀಶ್ ಕಡತನಮಲೆ ಅವರು ಅಗತ್ಯ ಸಲಹೆ ನೀಡಿದರು.
ನಂತರ ಮಾತನಾಡಿದ ಅವರು ‘ ನನ್ನ ಕಾಲಾವಧಿಯಲ್ಲಿ ನೂತನ ಡೈರಿ ಕಟ್ಟಡ ನಿರ್ಮಾಣವಾಗ ಬೇಕೆಂಬ , ಇಚ್ಛೆಯನ್ನು ಹುಚ್ಚನಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ನಿರ್ದೇಶಕರು ವ್ಯಕ್ತಪಡಿಸಿದ್ದರು. ಅದರಂತೆ ಇಂದು ನೂತನ ಡೈರಿ ಕಟ್ಟಡ ಉದ್ಘಾಟಿಸಲಾಗಿದೆ.
ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕನಾಗಿ ಅಧಿಕಾರಕ್ಕೆ ಬಂದಾಗಿನಿಂದ ಅನಾರೋಗ್ಯಕ್ಕೆ ತುತ್ತಾದ ಹಾಲು ಉತ್ಪಾದಕ ರೈತರ ಕುಟುಂಬಗಳಿಗೆ ಆಸ್ಪತ್ರೆಗೆ ದಾಖಲಾದ 24 ಗಂಟೆಯೊಳಗೆ 25 ಸಾವಿರ ರು.ಗಳ ತುರ್ತು ಪರಿಹಾರದ ಡಿ.ಡಿ. ವಿತರಣೆ, ಅಕಾಲಿಕ ಮರಣಕ್ಕೆ ತುತ್ತಾದ ರೈತರ ರಾಸುಗಳಿಗೆ 75 ರಿಂದ 80 ಸಾವಿರ ರು.ಗಳ ವಿಮೆ ಹಣ, ವಿಮೆಯಿಲ್ಲದ ರಾಸುಗಳ ಮರಣಕ್ಕೆ 10 ಸಾವಿರ ರು.ಗಳ ಸಹಾಯಧನ ವಿತರಣೆ ಮುಂತಾದ ಹಲವು ಸವಲತ್ತುಗಳನ್ನು ಕೊಡಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಹುಚ್ಚನಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಹುಸ್ಕೂರು ಗ್ರಾಮ ಪಂಚಾಯಿತಿ ಸದಸ್ಯರು, ಹಾಲು ಉತ್ಪಾದಕರು, ಅಕ್ಕ ಪಕ್ಕದ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಾಹಕರು ಹಾಗೂ ಗ್ರಾಮಸ್ಥರಿದ್ದರು.
ತಮ್ಮ ಮೇಲಿನ ಆರೋಪಕ್ಕೆ ತೆರೆ ಎಳೆದ ಸತೀಶ್ ಕಡತನಮಲೆ :
ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಸಿಬ್ಬಂದಿಯ ಮೇಲೆ ಹಲ್ಲೆ ಆರೋಪ ಕುರಿತು ಪ್ರತಿಕ್ರಿಸಿದ ಸತೀಶ್ ಕಡತನಮಲೆ ‘ನಾನು ವಿದ್ಯಾವಂತ ಕಚೇರಿ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿಲ್ಲ, ಸಹಾಯಕ ನಿಬಂಧಕರ ಕಚೇರಿಯಲ್ಲಿ ಬ್ರೋಕರ್ ಗಳ ಹಾವಳಿ ಮಿತಿಮೀರಿದ್ದು, ಪ್ರತಿ ಕೆಲಸಕ್ಕೂ ರೈತರು ಹಣ ನೀಡಿ ಕೆಲಸ ಸಾಧಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂಬ ಮಾಹಿತಿ ಅನ್ವಯ ರೈತರೊಂದಿಗೆ ಕಚೇರಿಗೆ ತೆರಳಿ ಪ್ರಶ್ನಿಸಿದ್ದೇನೆ, ಆ ವೇಳೆ ಅಲ್ಲೇ ಇದ್ದ ಬ್ರೋಕರ್ ಒಬ್ಬನನ್ನು ಇಲ್ಲಿ ನಿನ್ನದೇನು ಕೆಲಸ? ಹೊರಗೆ ಹೋಗು ಎಂದು ಏರು ಧ್ವನಿಯಲ್ಲಿ ಹೇಳಿದ್ದೇನೆ, ರೈತರಿಗಾದ ಅನ್ಯಾಯದ ವಿರುದ್ಧ ಏರು ಧ್ವನಿಯಲ್ಲಿ ಪ್ರಶ್ನಿಸುವುದೇ ತಪ್ಪು ಎನ್ನುವುದಾದರೆ, ನಾನು ರೈತ ಮುಖಂಡನಾಗಿ ಏನು ಪ್ರಯೋಜನ ಎಂದು ತಮ್ಮ ಮೇಲಿನ ಆರೋಪಕ್ಕೆ ತೆರೆ ಎಳೆದರು.
