6.5 ಕೋಟಿ ರು.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಎಸ್.ಆರ್.ವಿಶ್ವನಾಥ್ ಚಾಲನೆ :
ಯಲಹಂಕ : ಕ್ಷೇತ್ರದ ಸಿಂಗನಾಯಕನಹಳ್ಳಿ, ಹಾರೋಹಳ್ಳಿ, ದೊಡ್ಡಬ್ಯಾಲಕೆರೆ ಗ್ರಾಮಗಳಲ್ಲಿ 6.5 ಕೋಟಿ ರು. ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಗುರುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ‘ಲೋಕೋಪಯೋಗಿ ಇಲಾಖೆಯ ಅನುದಾನದ ಅಡಿಯಲ್ಲಿ 6.5 ಕೋಟಿ ರು. ಅಂದಾಜು ವೆಚ್ಚದಲ್ಲಿ ಇಂದು ಸಿಂಗನಾಯಕನಹಳ್ಳಿ ಕೆರೆ ಏರಿಯ ಮೂಲಕ ನಾಗದಾಸನಹಳ್ಳಿಗೆ ಸೇರುವ ರಸ್ತೆ, ದೊಡ್ಡಬಳ್ಳಾಪುರ ಮುಖ್ಯರಸ್ತೆಯಿಂದ ಕೆಂಚೇನಹಳ್ಳಿ, ಹಾರೋಹಳ್ಳಿ, ಗಂಟಿಗಾನಹಳ್ಳಿ ಸೇರುವ ರಸ್ತೆ, ದೊಡ್ಡಬ್ಯಾಲಕೆರೆ ಗ್ರಾಮದಿಂದ ಶಿವಕೋಟೆ ಮಾರ್ಗವಾಗಿ ಐಐಎಚ್‌ಆರ್ ಮತ್ತು ಲಿಂಗನಹಳ್ಳಿ ಸೇರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದು, ಟೆಂಡರ್ ಪ್ರಕ್ರಿಯೆಯಲ್ಲೂ ಸಹ ಗುತ್ತಿಗೆದಾರರು ಪಾಲ್ಗೊಳ್ಳುತ್ತಿಲ್ಲ, ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಗಮನ ಹರಿಸಿ, ಸಮಸ್ಯೆಗಳಿದ್ದಲ್ಲಿ ಅದನ್ನು ಬಗೆಹರಿಸುವ ಮೂಲಕ ಕಾಮಗಾರಿ ನಿರ್ವಹಣೆಗೆ ಸ್ಪಂದಿಸಬೇಕೆಂಬುದು ನಮ್ಮ ಕೋರಿಕೆಯಾಗಿದೆ ಎಂದರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವದ ಯೋಜನೆಯಾದ ಚಂದ್ರಯಾನ-3 ಬುಧವಾರ ಸಂಜೆ ಯಶಸ್ವಿಯಾಗಿ ಚಂದ್ರನ ಅಂಗಳ ತಲುಪಿದ್ದು, ಇದು ದೇಶವನ್ನು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಕ್ಕೇರಿಸಿದೆ. ಚಂದ್ರನ ದಕ್ಷಿಣ ದೃವ ತಲುಪಿದ ಜಗತ್ತಿನ ಮೊದಲ ದೇಶ ಭಾರತ ಎಂಬುದು ಹೆಮ್ಮೆಯ ವಿಷಯ. ಈ ಯೋಜನೆಯ ಯಶಸ್ಸಿಗಾಗಿ ಕಳೆದ ಹಲವು ದಿನಗಳಿಂದ ಶ್ರದ್ಧೆಯಿಂದ ಕಾರ್ಯನಿರ್ವಹಿಸಿರುವ ಇಸ್ರೋ ಸಂಸ್ಥೆಯ ನಮ್ಮ ಹೆಮ್ಮೆಯ ವಿಜ್ಞಾನಿಗಳ ಸಾಧನೆಗೆ ಇಡೀ ದೇಶದ ಜನತೆ ಪಕ್ಷಾತೀತವಾಗಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರು ಇಸ್ರೋ ಸಂಸ್ಥೆಯ ವಿಜ್ಞಾನಿಗಳ ಸಾಧನೆಗೆ ದಕ್ಷಿಣ ಆಫ್ರಿಕಾದಿಂದಲೇ ಶುಭ ಹಾರೈಸುವ ಮೂಲಕ ಪ್ರೋತ್ಸಾಹಿಸಿದ್ದಾರೆ. ಇಸ್ರೋ ಸಂಸ್ಥೆಯ ನಮ್ಮ ವಿಜ್ಞಾನಿಗಳ ಮುಂದಿನ ಗುರಿ ಶುಕ್ರ ಮತ್ತು ಸೂರ್ಯನ ಅಂಗಳಕ್ಕೆ ಉಪಗ್ರಹ ಉಡಾವಣೆ ಮಾಡುವುದಾಗಿದ್ದು, ಭಾರತ ಇಂತಹ ಅಭೂತಪೂರ್ವ ವೈಜ್ಞಾನಿಕ ಸಾಧನೆಗಳ ಮೂಲಕ ವಿಶ್ವಗುರುವಾಗುವತ್ತ ದಾಪುಗಾಲು ಇಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹೆಚ್.ಬಿ.ಹನುಮಯ್ಯ, ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಸತೀಶ್ ಕಡತನಮಲೆ, ಡಿ.ಜಿ.ಅಪ್ಪಯ್ಯಣ್ಣ, ಎಂ.ಸತೀಶ್, ಅದ್ದೆ ಎಂ.ಮಂಜುನಾಥ್, ವಿ.ವಿ.ರಾಮಮೂರ್ತಿ, ಮಾದಪ್ಪನಹಳ್ಳಿ ಕೃಷ್ಣಮೂರ್ತಿ, ನಾಗೇನಹಳ್ಳಿ ಶಿವಕುಮಾರ್, ಲಿಂಗನಹಳ್ಳಿ ವೆಂಕಟೇಶ್, ಶಿವಕೋಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಟಿ.ರಮೇಶ್. ಇಂದ್ರಮ್ಮ ರಾಮಾಂಜಿನಪ್ಪ, ಹಾಲಿ ಅಧ್ಯಕ್ಷೆ ಮುನಿರತ್ನಮ್ಮ ಬೈಲಪ್ಪ,ಉಪಾಧ್ಯಕ್ಷೆ ಗೌರಮ್ಮ ನಾರಾಯಣಸ್ವಾಮಿ, ಮುನಿಯಲ್ಲಪ್ಪ, ಮಂಜುನಾಥ್, ಕೆ.ಪಿ.ಮಂಜುನಾಥ್ ಸೇರಿದಂತೆ ಇನ್ನಿತರರಿದ್ದರು.