
ಜಾಗತಿಕ ನಾಯಕತ್ವ ಸಮ್ಮೇಳನಕ್ಕೆ ಚಾಲನೆ : ಹಲವು ಮಹತ್ವದ ಒಪ್ಪಂದಗಳಿಗೆ ಸಹಿ :
ಯಲಹಂಕ : ಟಿ.ಎ. ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ (ಟ್ಯಾಪ್ಮಿ), ಯುನೈಟೆಡ್ ಕಿಂಗ್ಡಂನ ಸೌತಾಂಪ್ಟನ್ ಬ್ಯುಸಿನೆಸ್ ಸ್ಕೂಲ್ ಸಹಯೋಗದೊಂದಿಗೆ ಯಲಹಂಕ ಸಮೀಪದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕ್ಯಾಂಪಸ್ನಲ್ಲಿ ಆಯೋಜಿಸಿರುವ ಎರಡು ದಿನಗಳ ಜಾಗತಿಕ ನಾಯಕತ್ವ ಸಮ್ಮೇಳನ 2023ಕ್ಕೆ ಕರ್ನಾಟಕ ಸರ್ಕಾರದ ಐಟಿ, ಬಿಟಿ ಮತ್ತು ಎಸ್ & ಟಿ ಕಾರ್ಯದರ್ಶಿ ಡಾ. ಏಕರೂಪ್ ಕೌರ್ ಶನಿವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ‘ಎಐ ನಮ್ಮ ದೈನಂದಿನ ಜೀವನ ಮತ್ತು ವ್ಯಾಪಾರ ಪ್ರಪಂಚದ ಅವಿಭಾಜ್ಯ ಅಂಗವಾಗಿದೆ. ಇದು ಕೈಗಾರಿಕೆ ಗಳನ್ನು ಮರುರೂಪಿಸುತ್ತಿದೆ, ನಾಯಕತ್ವದ ಮಾದರಿಗಳನ್ನು ಮರುವ್ಯಾಖ್ಯಾನಿಸುತ್ತದೆ. ನಾವು ನಾಯಕತ್ವದಲ್ಲಿ ಎಐ ಅನ್ನು ಅಳವಡಿಸಿಕೊಂಡ ಮೇಲೆ, ನಿರ್ಣಾಯಕ ಸಾಮಾಜಿಕ ಪರಿಣಾಮಗಳನ್ನು ಎದುರಿಸಬೇಕು ಎಂದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಉಪಕುಲಪತಿ ಪ್ರೊ. ಮಧು ವೀರರಾಘವನ್ ಮಾತನಾಡಿ “ಎಐ-ಚಾಲಿತ ಭವಿಷ್ಯದ ನಾಯಕತ್ವದ ಯುಗದಲ್ಲಿ, ನಾವು ಅದರ ಸಾಮಾಜಿಕ ಪ್ರಭಾವವನ್ನು ಪರಿಗಣಿಸಬೇಕು ಮತ್ತು ಸಹಯೋಗಗಳನ್ನು ಬೆಳೆಸಿಕೊಳ್ಳ ಬೇಕು. ನಮ್ಮ ಪ್ರಪಂಚವು ಮಾಹಿತಿ ಮತ್ತು ಡೇಟಾದ ಭಾಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಎಐ ಅನ್ನು ಬಳಸಿಕೊಳ್ಳಲು ಬಲವಾದ ನಿಯಂತ್ರಕ ಮತ್ತು ನೈತಿಕ ಚೌಕಟ್ಟಿನ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಸೌತಾಂಪ್ಟನ್ ಬ್ಯುಸಿನೆಸ್ ಸ್ಕೂಲ್ ವಿಶ್ವವಿದ್ಯಾ ಲಯದ ಪ್ರೊಫೆಸರ್ ಸ್ಟೀಫನ್ ಒಂಗ್ಗೊ ಒಪ್ಪಂದಗಳ ಕುರಿತು ಮಾತನಾಡಿದರು.
ಎಐ ಚಾಲಿತ ನಾಯಕತ್ವ, ನ್ಯಾವಿಗೇಟಿಂಗ್ ದಿ ಫ್ಯೂಚರ್ ಆಫ್ ಬ್ಯುಸಿನೆಸ್ ಅಂಡ್ ಸೊಸೈಟಿ ಎಂಬ ವಿಷಯದ ಮೇಲೆ ಕೇಂದ್ರೀಕೃತ ವಾಗಿರುವ ಈ ಸಮಾವೇಶದಲ್ಲಿ ಹಲವು ಕಾರ್ಪೊರೇಟ್ ಸಂಸ್ಥೆಗಳ ನಾಯಕರು ಭಾಗಿಯಾಗಿದ್ದಾರೆ.