ಯಲಹಂಕದ ಸೂರಜ್ ಸ್ವೈನ್ ಗೆ ಚಿನ್ನದ ಪದಕ :
ಯಲಹಂಕ : ಭಾರತೀಯ ರೋಲರ್ ಸ್ಕೇಟಿಂಗ್ ಸಂಸ್ಥೆ ವತಿಯಿಂದ ಚೆನ್ನೈ ನಲ್ಲಿ ಇತ್ತೀಚೆಗೆ ನಡೆದ 61ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಯಲಹಂಕದ ನಾರಾಯಣ ಇ-ಟೆಕ್ನೋ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಸೂರಜ್ ಸ್ವೈನ್ ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕ ತನ್ನದಾಗಿಸಿಕೊಳ್ಳುವ ಮೂಲಕ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ.
ಯಲಹಂಕ ನಿವಾಸಿಗಳಾದ ಶರತ್ ಸ್ವೈನ್ ಮತ್ತು ನಮಿತಾ ಸ್ವೈನ್ ದಂಪತಿಗಳ ಮಗನಾಗಿರುವ ಸೂರಜ್ ಬೃಂದಾವನ ಸ್ಕೇಟಿಂಗ್ ಸಂಸ್ಥೆಯಿಂದ, ತರಬೇತು ದಾರರಾದ ನಾಗೇಶ್ ಸಿ ಎಂ ಮತ್ತು ಮಧುಚಂದ್ರ ರವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದು, ಬೆಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಮತ್ತು ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಪಡೆಯುವ ಮೂಲಕ 2021ರಲ್ಲಿ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದ.
2021 ಮತ್ತು 2022ರಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಗಳಲ್ಲಿ ಎರಡರಲ್ಲೂ ಚಿನ್ನದ ಪದಕ ಪಡೆದು ಪೋಷಕರು, ತರಬೇತುದಾರರು, ಶಾಲೆಗೆ ಕೀರ್ತಿ ತಂದುಕೊಟ್ಟಿದ್ದ.
ಇದೀಗ ಚೆನೈ ನಲ್ಲಿ ಇತ್ತೀಚೆಗೆ ನಡೆದ 61ನೇ ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ರಾಜ್ಯದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಸೂರಜ್ ಸತತ 3ನೆಯ ಬಾರಿಗೆ ಚಿನ್ನದ ಪದಕ ಪಡೆದು ಮತ್ತೊಮ್ಮೆ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಆಗಿ ಹೊರ ಹೋಮ್ಮುವ ಮೂಲಕ ಅದ್ಭುತ ಸಾಧನೆ ಗೈದಿದ್ದಾನೆ.
ಸೂರಜ್ ಸ್ವೈನ್ ಸಾಧನೆಗೆ ಬೃಂದಾವನ ಸ್ಕೇಟಿಂಗ್ ಸಂಸ್ಥೆ, ನಾರಾಯಣ ಇ-ಟೆಕ್ನೋ ಶಾಲೆಯ ಶಿಕ್ಷಕ ವೃಂದ ಹಾಗೂ ಪೋಷಕರು ಸೇರಿದಂತೆ ಹಲವು ಗಣ್ಯರು ಅಭಿನಂದನಾಪೂರ್ವಕ ಪ್ರಸಂಸೆ ವ್ಯಕ್ತಪಡಿಸಿದ್ದಾರೆ.
