ಯಲಹಂಕದ ಬಿಎಂಎಸ್ಐಟಿ ಕಾಲೇಜಿನಲ್ಲಿ ಆಯೋಜನೆ :

ಯಲಹಂಕ : ಮಿಲನೋತ್ಸವ-2024 ಕಾರ್ಯಕ್ರಮದ ಪ್ರಯುಕ್ತ ಯಲಹಂಕದ ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಬಿ.ಎಂ.ಎಸ್.ಐ.ಟಿ ಕಾಲೇಜಿನ ಅಧ್ಯಕ್ಷ ಅವಿರಾಮ್ ಶರ್ಮ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ‘ಉದ್ಯೋಗಿಗಳು ಕ್ರೀಡೆ ಮತ್ತು ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳು ವುದರಿಂದ ಮನಸ್ಸಿಗೆ ಸಂತೋಷ, ವಿಶ್ರಾಂತಿ ದೊರಕುತ್ತದೆ. ಆರೋಗ್ಯದ ಹಿತದೃಷ್ಠಿಯಿಂದಲೂ ತುಂಬಾ ಒಳ್ಳೆಯದು. ಮುಂದಿನ ದಿನಗಳಲ್ಲಿ ಸಂಸ್ಥೆಯ ಇನ್ನೂ ಹೆಚ್ಚಿನ ಸಿಬ್ಬಂದಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು, ಇಂತಹ ಕ್ರೀಡಾ ಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ಸ್ಪರ್ಧಾ ಮನೋಭಾವ ಬೆಳೆಯುತ್ತದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಬಿಎಂಎಸ್ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಮೋಹನ್ ಬಾಬು ಜಿ.ಎನ್. ಮಾತನಾಡಿ ‘ಬಿಎಂಎಸ್ಐಟಿ ಕಾಲೇಜಿನಲ್ಲಿ ಆಚರಿಸುತ್ತಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಿ.ಎಂ.ಎಸ್ ಸಮೂಹದ ಎಲ್ಲ ಸಂಸ್ಥೆಗಳಿಂದ ಸಿಬ್ಬಂದಿಗಳು ಆಗಮಿಸಿರುವುದು ಸಂತೋಷದ ವಿಷಯ. ಇದರಿಂದ ನಮ್ಮ ನಡುವಿನ ಬಾಂಧವ್ಯ ವೃದ್ಧಿಯಗುವುದರ ಜತೆಗೆ ಅನೇಕ ಕ್ರಿಯಾತ್ಮಕ ವಿಷಯಗಳನ್ನು ತಿಳಿದುಕೊಳ್ಳಲು ಅವಕಾಶ ದೊರೆಯುತ್ತದೆ. ಕ್ರೀಡೆಯಿಂದ ದೇಹ ಮತ್ತು ಮನಸ್ಸು ಉಲ್ಲಾಸಿತ ವಾಗುತ್ತದೆ ಎಂದರು.

ಎರಡು ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ಬಿ.ಎಂ.ಎಸ್ ಶಿಕ್ಷಣ ಸಮೂಹದ 12 ಶಿಕ್ಷಣ ಸಂಸ್ಥೆಗಳ 400 ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದು, ಕ್ರಿಕೆಟ್, ಬ್ಯಾಡ್ಮಿಂಟನ್, ಚೆಸ್, ಟೇಬಲ್ ಟೆನ್ನಿಸ್, ಹಗ್ಗ ಜಗ್ಗಾಟ, ವಾಲಿಬಾಲ್, ಥ್ರೋಬಾಲ್ ಮುಂತಾದ ಕ್ರೀಡೆಗಳು, ಗಾಯನ ಹಾಗೂ ನೃತ್ಯ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಿದರು.

ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಡಾ. ಅನಿಲ್ ಜಿ.ಎನ್, ವಿದ್ಯಾರ್ಥಿ ಕ್ಷೇಮಭಿವೃದ್ಧಿ ನಿರ್ದೇಶಕ ಡಾ. ಅಂಬಿಕಾ ಆರ್, ಕ್ರೀಡಾ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ್, ಹೆಚ್ಚುವರಿ ಕ್ರೀಡಾ ನಿರ್ದೇಶ ಲಫ್ಟಿನೆಂಟ್ ರಾಣಿ ಎಂ. ಎಸ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *