


ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಥಕ್ಕರ್ ಫ್ಯಾಮಿಲಿ ಫೌಂಡೇಶನ್ ಸಹಯೋಗ :
ಬ್ಯಾಟರಾಯನಪುರ : ಯಲಹಂಕ, ಜಕ್ಕೂರು, ಹೆಬ್ಬಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ 200ಕ್ಕೂ ಹೆಚ್ಚು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ 35,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪೌಷ್ಠಿಕ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಉದ್ದೇಶದಿಂದ ಅಕ್ಷಯ ಪಾತ್ರ ಫೌಂಡೇಶನ್ (ಟಿಎಪಿಎಫ್), ಥಕ್ಕರ್ ಫ್ಯಾಮಿಲಿ ಫೌಂಡೇಷನ್ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಚಿಕ್ಕಜಾಲದಲ್ಲಿ ನಿರ್ಮಿಸಿದ್ದ 75ನೇ ಅತ್ಯಾಧುನಿಕ ಅಡುಗೆ ಮನೆಯನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ಅಕ್ಷಯ ಪಾತ್ರ ಫೌಂಡೇಷನ್ ನ ಸಂಸ್ಥಾಪಕ ಮಧು ಪಂಡಿತ್ ದಾಸ್ ಸೋಮವಾರ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣಮೂರ್ತಿ ಮಾತನಾಡಿ “ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಪೌಷ್ಠಿಕ ಆಹಾರವನ್ನು ಒದಗಿಸುವ ಅಕ್ಷಯ ಪಾತ್ರದ ಮಹತ್ತರ ಕಾರ್ಯ ಶ್ಲಾಘನೀಯ. ಎಲ್ಲರೂ ಒಟ್ಟಾಗಿ ಸೇರಿದರೆ ಬದುಕನ್ನು ಬದಲಿಸಬಹುದು ಮತ್ತು ಎಲ್ಲರಿಗೂ ಉಜ್ವಲ ಭವಿಷ್ಯ ಒದಗಿಸಬಹುದು. ಈ ಅಡುಗೆ ಮನೆ ಸ್ಥಾಪನೆಗೆ ಸಹಯೋಗ ಒದಗಿಸಿರುವ ಥಕ್ಕರ್ ಕುಟುಂಬಕ್ಕೆ ಮತ್ತು ಊಟ ಒದಗಿಸುವ ಯೋಜನೆಯ ಶೇ.55-56ರಷ್ಟು ಊಟದ ಖರ್ಚು ಭರಿಸುತ್ತಿರುವ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.
ಕಂದಾಯ ಸಚಿವ ಕೃಷ್ಣಭೈರೇಗೌಡರು ಮಾತನಾಡಿ “ನಾರಾಯಣ ಮೂರ್ತಿಯವರು ಮತ್ತು ಜನಾರ್ಧನ ಥಕ್ಕರ್ ಅವರು ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಿರುವುದು ಮೆಚ್ಚುಗೆ ಸಲ್ಲಿಸಲೇಬೇಕಾದ ವಿಚಾರವಾಗಿದೆ. ಇನ್ನಷ್ಟು ಶ್ರೀಮಂತ ವರ್ಗದವರು ಸಮಾಜಕ್ಕೆ ಸೇವೆ ಸಲ್ಲಿಸಲು ಮುಂದಾಗಲು ಅವರು ಸ್ಫೂರ್ತಿ ನೀಡಿದ್ದಾರೆ” ಎಂದು ಹೇಳಿದರು.
ಅಕ್ಷಯ ಪಾತ್ರ ಫೌಂಡೇಶನ್ ನ ಸಂಸ್ಥಾಪಕ- ಅಧ್ಯಕ್ಷರಾದ ಶ್ರೀ ಮಧು ಪಂಡಿತ್ ದಾಸ ಮಾತನಾಡಿ, “ನಮ್ಮ ರಾಜ್ಯದ ಮಕ್ಕಳಿಗೆ ಊಟ ಒದಗಿಸುವ ಅವಕಾಶ ಒದಗಿಸಿದ್ದಕ್ಕೆ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ. ನಾವು ಪ್ರಸ್ತುತ ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ, ಮಂಗಳೂರು ಮತ್ತು ಮೈಸೂರುಗಳಲ್ಲಿರುವ ಒಂಬತ್ತು ಕೇಂದ್ರೀಕೃತ ಅಡುಗೆಮನೆಗಳ ಮೂಲಕ ಆಹಾರವನ್ನು ಒದಗಿಸುತ್ತಿದ್ದೇವೆ” ಎಂದರು.
ಕಾರ್ಯಕ್ರಮದಲ್ಲಿ ದಾನಿಗಳಾದ ಥಕ್ಕರ್ ಫ್ಯಾಮಿಲಿ ಫೌಂಡೇಶನ್ ನ ಚೇರ್ಮನ್ ಶ್ರೀ ಜನಾರ್ದನ್ ಠಕ್ಕರ್, ವೈಸ್ ಚೇರ್ಮನ್ ಲಿಂಡಾ ಥಕ್ಕರ್, ರಿಲಯನ್ಸ್ ಲಿಮಿಟೆಡ್ ನ ಸಿಐಓ ಶ್ರೀ ಜ್ಯೋತಿಂದ್ರ ಥಕ್ಕರ್, ಅಕ್ಷಯ ಪಾತ್ರ ಫೌಂಡೇಶನ್ ನ ಸಹ-ಸಂಸ್ಥಾಪಕ ಮತ್ತು ಉಪಾಧ್ಯಕ್ಷರಾದ ಶ್ರೀ ಚಂಚಲಪತಿ ದಾಸ ಮತ್ತು ಸಿಇಓ ಶ್ರೀ ಶ್ರೀಧರ್ ವೆಂಕಟ್ ಉಪಸ್ಥಿತರಿದ್ದರು.
ಚಿಕ್ಕಜಾಲದಲ್ಲಿ ಆರಂಭಗೊಂಡಿರುವ ಅತ್ಯಾಧುನಿಕವಾದ ಈ ಅಡುಗೆ ಮನೆಯು ದೇಶದಲ್ಲಿರುವ ಅಕ್ಷಯ ಪಾತ್ರದ 75ನೇ ಕೇಂದ್ರೀಕೃತ ಅಡುಗೆ ಮನೆ ಆಗಿದ್ದು, ಬೆಂಗಳೂರಿನಲ್ಲಿನ 5ನೇ ಅಡುಗೆ ಮನೆ ಆಗಿದೆ. ಈ ಅಡುಗೆ ಮನೆಯ ಮೂಲಕ 200 ಶಾಲೆಗಳ 35,000 ಮಕ್ಕಳಿಗೆ ಪೌಷ್ಟಿಕ ಮಧ್ಯಾಹ್ನದ ಊಟ ಒದಗಿಸಲಾಗುತ್ತದೆ.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ
Public power
R Hanumanthu
Kogilu layout
Yelahanka
9845085793
7349337989
9035282296