ಬೆಂಗಳೂರು, 5 ಅಕ್ಟೋಬರ್ 2024: ಗ್ರಾಮೀಣ ಪ್ರದೇಶಗಳಲ್ಲಿ ಅತ್ಯುತ್ತಮ ಅತ್ಯಾಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ತರ ಕೆಲಸ ಮಾಡುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು ಇಂದು ರಾಮನಗರ ಜಿಲ್ಲೆಯ ಎರಡು ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಆಧುನೀಕರಿಸಿದ ಮೂಲ ಸೌಲಭ್ಯಗಳನ್ನು ಪೂರ್ಣಗೊಳಿಸಿ ಶಾಲೆಗಳಿಗೆ ಹಸ್ತಾಂತರಿಸಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಕ್ಕರೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಂಬಳ್ಳಿಯ ಆಧುನಿಕ ಮೂಲ ಸೌಲಭ್ಯಗಳ ಹಸ್ತಾಂತರ ಕಾರ್ಯಕ್ರಮವು ಕರ್ನಾಟಕ ಸರ್ಕಾರದ ಗೌರವಾನ್ವಿತ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಸ್ಥಳೀಯ ಜನರಿಗೆ ಅಗತ್ಯವಿರು ಅತ್ಯಾಧುನಿಕ ಕಲಿಕೆಯ ಪರಿಸರವನ್ನು ಒದಗಿಸುವ ಟಿಕೆಎಂ ಸಂಸ್ಥೆಯ ಬದ್ಧತೆಯನ್ನು ಈ ಯೋಜನೆಯು ತೋರಿಸಿಕೊಟ್ಟಿದೆ. ಟಿಕೆಎಂ ಸಂಸ್ಥೆಯು ಈಗಾಗಲೇ 13 ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯ ಆಧುನೀಕರಣಗೊಳಿಸುವ ಯೋಜನೆಗಳನ್ನು ಪೂರ್ಣಗೊಳಿಸಿದೆ.

ಆಧುನೀಕರಣ ಯೋಜನೆಯ ಮೂಲಕ ಆಧುನಿಕ ತರಗತಿ ಕೊಠಡಿಗಳು, ಸಿಬ್ಬಂದಿ ಕೊಠಡಿ, ಅಡುಗೆ ಕೋಣೆ, ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ, ಕ್ರೀಡಾ ಕೊಠಡಿ ಮತ್ತು ಬಾಲಕ ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಶಾಲೆಗೆ ಸಂಪೂರ್ಣವಾಗಿ ಬೆಂಚುಗಳು, ಡೆಸ್ಕ್ ಗಳು, ಕುರ್ಚಿಗಳು, ಮೇಜುಗಳು, ಗ್ರಂಥಾಲಯದ ರಾಕ್ ಗಳು ಮತ್ತು ಪ್ರಯೋಗಾಲಯದ ಪೀಠೋಪಕರಣಗಳು ಇತ್ಯಾದಿಗಳನ್ನು ಒದಗಿಸಲಾಗಿದ್ದು, ಮಕ್ಕಳಿಗೆ ಅನುಕೂಲಕರ ಕಲಿಕಾ ವಾತಾವರಣವನ್ನು ಸೃಷ್ಟಿಸಲಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಕ್ಕರೆಯಲ್ಲಿ 1 ರಿಂದ 7ನೇ ತರಗತಿಗಳಲ್ಲಿ 424 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯು 14408 ಚದರ ಅಡಿಗಳಷ್ಟು ವಿಸ್ತಾರವಾದ ಜಾಗವನ್ನು ಹೊಂದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಂಬಳ್ಳಿಯಲ್ಲಿ 1ರಿಂದ 10ನೇ ತರವತಿವರೆಗೆ 765ರಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಯು 20178 ಚದರ ಅಡಿಗಳಷ್ಟು ವಿಸ್ತಾರ ಪ್ರದೇಶವನ್ನು ಹೊಂದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಕ್ಕರೆ ಅಭಿವೃದ್ಧಿ ಯೋಜನೆಗೆ ರೂ. 4.35 ಕೋಟಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಂಬಳ್ಳಿ ಅಭಿವೃದ್ಧಿ ಯೋಜನೆಗೆ ರೂ. 5.14 ಕೋಟಿ ಹಣವನ್ನು ಟಿಕೆಎಂ ನೀಡಿದೆ. ಈ ಮೂಲಕ ಶಾಲೆಯ ನಿರ್ದಿಷ್ಟ ಅಗತ್ಯತೆಗಳನ್ನು ಪೂರೈಸಲಾಗಿದೆ ಮತ್ತು ಎರಡೂ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಸಜ್ಜಾಗಿರುವಂತೆ ನೋಡಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಟಿಕೆಎಂ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಸಂವಹನ ಅಧಿಕಾರಿ ಶ್ರೀ ಸುದೀಪ್ ದಳವಿ ಅವರು, “ಶಿಕ್ಷಣವು ಬಹಳ ಮುಖ್ಯ ಮತ್ತು ಪ್ರಗತಿಪರ ಜನಸಮುದಾಯಕ್ಕೆ ಗಟ್ಟಿ ಅಡಿಪಾಯ ಎಂಬುದನ್ನು ಟಿಕೆಎಂ ನಂಬುತ್ತದೆ. ಒಂದು ಜವಾಬ್ದಾರಿಯುತ ಸಂಸ್ಥೆಯಾಗಿ ನಾವು ರಾಜ್ಯ ಮತ್ತು ರಾಷ್ಟ್ರದ ಒಟ್ಟಾರೆ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರದ ಪ್ರಾಮುಖ್ಯತೆಯನ್ನು ಅರಿತುಕೊಂಡು ಗ್ರಾಮೀಣ ಪ್ರದೇಶದ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ಬದ್ಧರಾಗಿದ್ದೇವೆ. ಶಾಲೆಗಳಾದ್ಯಂತ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ, ಕುತೂಹಲಕ್ಕೆ ನೀರೆರೆಯುವ, ಕಲಿಕೆಗೆ ಪ್ರೋತ್ಸಾಹಿಸುವ ಮತ್ತು ವಿದ್ಯಾರ್ಥಿಗಳು ಯಶಸ್ವಿಯಾಗಲು ಅಗತ್ಯವಿರುವ ಸಾಧನಗಳಿರುವ ಕಲಿಕಾ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆ. ರಾಮನಗರದಲ್ಲಿ ನಮ್ಮ ಸಂಸ್ಥೆಯು ಸಹಯೋಗದ ಕೆಲಸಗಳಿಂದ ಮುನ್ನಡೆಯುತ್ತಿದೆ, ಆ ನಿಟ್ಟಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಕ್ಕರೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಂಬಳ್ಳಿ ಶಾಲೆಗಳ ಶೈಕ್ಷಣಿಕ ಮೂಲ ಸೌಲಭ್ಯಗಳನ್ನು ಆಧುನೀಕರಿಸುವ ಅವಕಾಶ ದೊರಕಿರುವುದು ನಮ್ಮ ಗೌರವವೆಂದೇ ಭಾವಿಸುತ್ತೇವೆ. ತರಗತಿಗಳು ಮತ್ತು ಅದರ ಹೊರತಾಗಿಯೂ ಜನ ಸಮುದಾಯಗಳ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಸಮಾಜದಲ್ಲಿ ಅರ್ಥಪೂರ್ಣ ಪರಿಣಾಮ ಬೀರಲು ನಾವು ಎದುರು ನೋಡುತ್ತಿದ್ದೇವೆ ಮತ್ತು ಬದ್ಧರಾಗಿದ್ದೇವೆ” ಎಂದು ಹೇಳಿದರು.

2001ರಿಂದಲೂ ಸಿಎಸ್ಆರ್ ಯೋಜನೆಗಳು ಟಿಕೆಎಂ ಸಂಸ್ಥೆಯ ಫಿಲಾಸಫಿಯ ಅವಿಭಾಜ್ಯ ಅಂಗವಾಗಿದೆ. ಶಿಕ್ಷಣ, ಪರಿಸರ, ನೈರ್ಮಲ್ಯ, ಆರೋಗ್ಯ, ರಸ್ತೆ ಸುರಕ್ಷತೆ ಮತ್ತು ಕೌಶಲ್ಯ ಅಭಿವೃದ್ಧಿ ವಿಚಾರಗಳಲ್ಲಿ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಟಿಕೆಎಂ ಹಲವಾರು ಯೋಜನೆಗಳನ್ನು ಕೈಗೊಂಡಿದೆ.

ಜೊತೆಗೆ ಟಿಕೆಎಂ ಸಂಸ್ಥೆಯು 2023-24 ರಿಂದ 2024-25ರವರೆಗೆ ರಾಮನಗರ ಜಿಲ್ಲೆಯ 150 ಅಂಗನವಾಡಿ ಕೇಂದ್ರಗಳಲ್ಲಿ ಟೊಯೋಟಾ ಅಂಗನವಾಡಿ ಕಾರ್ಯಕ್ರಮವನ್ನು (ಟಿಎಡಿಪಿ) ಜಾರಿಗೊಳಿಸಿದೆ. ಆರ್ಥಿ ವರ್ಷ 2024-26ರವರೆಗೆ ಈ ಯೋಜನೆ ವಿಸ್ತರಿಸುವ ತೀರ್ಮಾನವನ್ನು ಸಂಸ್ಥೆ ಕೈಗೊಂಡಿದೆ. ಈ ಕಾರ್ಯಕ್ರಮದ ಮೂಲಕ ಅಂಗನವಾಡಿ ಕಾರ್ಯಕರ್ತೆಯರ ಸಾಮರ್ಥ್ಯ ಹೆಚ್ಚಿಸುವ, ಚಟುವಟಿಕೆ ಆಧಾರಿತ ಕಲಿಕೆಯ ವಿಧಾನಗಳನ್ನು ಪರಿಚಯಿಸುವ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವ ಕ್ರಮ ಕೈಗೊಳ್ಳಲಾಗಿದ್ದು, ಆ ಮೂಲಕ ಮಾದರಿ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ವಿಶೇಷವಾಗಿ 2023ರಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯಕ್ರಮದಡಿಯಲ್ಲಿ 30 ಕೇಂದ್ರಗಳನ್ನು ಅಭಿವೃದ್ಧಿಪಡಿಸಿ ಹಸ್ತಾಂತರಿಸಲಾಗಿದೆ.

ಎಲ್ಲರಿಗೂ ಶಿಕ್ಷಣ ಒದಗಿಸುವ ಆಲೋಚನೆಯ ಭಾಗವಾಗಿ ವಿಶೇಷ ಚೇತನ ಮಕ್ಕಳಿಗೆ ಸೂಕ್ತ ಸೌಲಭ್ಯ ಒದಗಿಸಲಾಗುತ್ತಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಆಧುನಿಕ ಶಾಲಾ ಮೂಲ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನಗಳಿಂದ ಕಳೆದ ಆರ್ಥಿಕ ವರ್ಷದಲ್ಲಿ 12,222 ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಿದೆ. ಮಹತ್ವದ ವಿಷಯವೆಂದರೆ ಈ ಕಾರ್ಯಕ್ರಮದ ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು 1,32,980 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕಂಪನಿಯು ತನ್ನ ಪ್ರಮುಖ ಕಾರ್ಯಕ್ರಮವಾದ ಎ ಬಿಹೇವಿಯರಲ್ ಚೇಂಜ್ ಡೆಮಾನ್‌ಸ್ಟ್ರೇಶನ್ (ಎಬಿಸಿಡಿ) ಅನ್ನು 2023ರಲ್ಲಿ ಪುನರಾರಂಭಿಸಿದ್ದು, ಆರ್ಥಿಕ ವರ್ಷ 2024-25ರಲ್ಲಿ ಈ ಕಾರ್ಯಕ್ರಮವನ್ನು 550 ಶಾಲೆಗಳಲ್ಲಿ ಅಳವಡಿಸಲಾಯಿದೆ ಮತ್ತು 28,000 ವಿದ್ಯಾರ್ಥಿಗಳಿಗೆ ಅದರ ಪ್ರಯೋಜನ ಲಭಿಸಿದೆ.

ಜನ ಸಮುದಾಯದ ಸಮಗ್ರ ಅಭಿವೃದ್ಧಿ ಮಾಡುವ ಗುರಿಯನ್ನಿಟ್ಟುಕೊಂಡಿರುವ ಟಿಕೆಎಂ ಸಂಸ್ಥೆಯು ಮತ್ತಷ್ಟು ಅತ್ಯುತ್ತಮ ಹಾಗೂ ಸುಸ್ಥಿರ ಸಿಎಸ್ಆರ್ ಯೋಜನೆಗಳನ್ನು ಪರಿಚಯಿಸಲು ಬದ್ಧವಾಗಿದೆ.

Leave a Reply

Your email address will not be published. Required fields are marked *